ಸಂಸ್ಥೆಗಳ ವಿವಿಧ ಪ್ರಕಾರಗಳ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಕಾಳಜಿ ದೊಡ್ಡದು: ಆಂಡ್ರ್ಯು ಡಿ. ಸಿಲ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಪ್ಪತ್ತೈದು ವರ್ಷಗಳ ಕಾಲ ಯಶಸ್ವೀ ಕಲಾವೃಂದವನ್ನು ಮುನ್ನಡೆಸುವಲ್ಲಿ ಅತ್ಯುನ್ನತ ಸಹಕಾರ ನೀಡುತ್ತಾ ತಮ್ಮ ಕೇಂದ್ರದ ಮಕ್ಕಳಿಗೆ ಒಂದು ಅವಕಾಶವಾಗಲಿ ಎಂಬ ಕಾಳಜಿಯಿಂದ ಸಂಸ್ಥೆಗಳ ವಿವಿಧ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ಮಾಡುವ ಮನಸ್ಸು ಹೆರಿಯ ಮಾಸ್ಟರ್‌ ಅವರದ್ದು. ತನ್ನ ದುಡಿಮೆಯ ಒಂದು ಪಾಲನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದು ಕಲಾ ಪೋಷಕ ಆಂಡ್ರ್ಯು ಡಿ. ಸಿಲ್ವಾ ಹೇಳಿದರು.

ಅವರು ತೆಕ್ಕಟ್ಟೆ ದೇವಾಡಿಗರ ಬೆಟ್ಟುವಿನಲ್ಲಿ ಇತ್ತೀಚಿಗೆ ಆಯೋಜಿಸಿದ ಯಶಸ್ವೀ ಕಲಾವೃಂದದ ಕಾರ್ಯಕ್ರಮದಲ್ಲಿ ಹೆರಿಯ ಮಾಸ್ಟರ್ ಹಾಗೂ ಗುಲಾಬಿ ಅವರನ್ನು ಗೌರವಿಸಿ ಮಾತನಾಡಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಮಾತನಾಡಿ, ಕಲೆಯು ನಿಂತ ನೀರಲ್ಲ. ಮಕ್ಕಳಿಗೆ ಕಲೆಯನ್ನು ಕಲಿಸಿ ಮುಂದಿನ ಜನಾಂಗಕ್ಕೆ ಕೈ ದಾಟಿಸುವ ಕೆಲಸ ಶ್ಲಾಘನೀಯ ಎಂದರು. 

ಗುರು ದೇವದಾಸ್ ರಾವ್ ಕೂಡ್ಲಿ, ಶ್ರೀನಿವಾಸ ಮಾಸ್ಟರ್, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಪ್ರಣಮ್ಯ, ಮನೀಶ್ ಉಪಸ್ಥಿತರಿದ್ದರು. ಬಳಿಕ ಸಂಗೀತ ಸಂಜೆ, ಯಕ್ಷ ಗಾನ ವೈಭವ, ಯಕ್ಷಗಾನ ಸುಧನ್ವಾರ್ಜುನ ರಂಗಪ್ರಸ್ತುತಿಗೊಂಡಿತು.