ಸಾಲಿಗ್ರಾಮದಲ್ಲಿ ವಸಂತ ವೇದ ಶಿಬಿರದ ಸಮಾರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಕಾರ್ಯಕ್ರಮ ಇತ್ತೀಚಿಗೆ ಜರಗಿತು.

ಕಾರ್ಯಕ್ರಮದಲ್ಲಿ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಪ್ರಕಾಶ ಕಾರಂತ ಮಾತನಾಡಿ, ನಮ್ಮ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಸಂಸ್ಕಾರಯುತ ಬದುಕಿಗೆ ಶ್ರೀ ದೇವಳದ ವತಿಯಿಂದ ಮೂರು ವಾರಗಳ ನಡೆದ ವಸಂತ ವೇದ ಶಿಬಿರ ಅತ್ಯಂತ ಯಶಸ್ವೀಯಾಗಿ ಜರಗಿದೆ ಎಂದು ದೇಗುಲದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಶಿಬಿರಾರ್ಥಿಗಳ ವೇದ ಘೋಷದಿಂದ ಆರಂಭಗೊಂಡ ಸಮಾರಂಭದಲ್ಲಿ ಶಿಬಿರದ ಸಂಕ್ಷಿಪ್ತ  ವರದಿಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಿ. ಚಂದ್ರಶೇಖರ ಉಪಾಧ್ಯ ಮಂಡಿಸಿದರು.

ಸಹ ಪ್ರಬಂಧಕ ಗಣೇಶ ಭಟ್ಟ ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ಪಟ್ಟಿ ವಾಚಿಸಿದರು. ಕೂ.ಮ.ಜ ಕೇಂದ್ರ ಸಂಸ್ಥೆಯ ಅಧ್ಯಕ್ಷ ಹೆಚ್. ಸತೀಶ ಹಂದೆ ಅಧ್ಯಕ್ಷತೆಯಲ್ಲಿವಹಿಸಿದ್ದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಎ. ಜಗದೀಶ ಕಾರಂತ, ಉದ್ಯಮಿ ರಘನಾಥ ಸೋಮಯಾಜಿ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಕೆ. ತಾರಾನಾಥ ಹೊಳ್ಳ, ಚಂದ್ರಶೇಖರ ನಾವಡ, ಪ್ರಸನ್ನ ತುಂಗ, ಸಾಲಿಗ್ರಾಮ ಅಂಗಸಂಸ್ಥೆಯ ಕಾರ್ಯದರ್ಶಿ ಮಹಾಬಲ ಹೇರ್ಳೆ ಮುಂತಾದವರು ಉಪಸ್ಥಿತರಿದ್ದರು. 

ನಿಗಮಾಗಮ ಶಾಲೆಯ ಅಧ್ಯಾಪಕ ವಾದಿರಾಜ ಐತಾಳ ಸಹಕರಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಶ್ರೀ ಗುರು ನರಸಿಂಹ ದೇವಳದ ಶ್ರೀ ಗುರು ನರಸಿಂಹ ನಿಗಮಾಗಮ ವೇದಪಾಠ ಶಾಲೆಯಲ್ಲಿ ಐದು ವರ್ಷಗಳ ಕಾಲ ಋಗ್ವೇದ ವೇದ ಅಧ್ಯಯನವನ್ನು ಮತ್ತು ಸಂಸ್ಕೃತ ಪಾಠವನ್ನು ಕಲಿತು ಪೂರ್ಣಗೊಳಿಸಿದ ಶ್ರೀವತ್ಸ, ಶ್ರೀಕಾಂತ ಹಾಗೂ ವರುಣ ಅವರುಗಳನ್ನು ಸನ್ಮಾನಿಸಲಾಯಿತು. 

ದಾನಿ ಸುಧೀಂದ್ರ, ಬೆಂಗಳೂರು ಅವರನ್ನು ಗುರುತಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಪರಶುರಾಮ ಭಟ್ಟ ವಂದನಾರ್ಪಣೆ ಮತ್ತು ಸಾಮೂಹಿಕ ಐಕ್ಯ ಮಂತ್ರ ಪಠಣದೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮದ ನಿರ್ವಹಣೆಯನ್ನು ಸಹಾಯಕ ಸಿಬ್ಬಂದಿ ಅಖಿಲೇಶ ಐತಾಳ ಗೈದರು.