ಡಾ. ಬಿ.ಬಿ. ಹೆಗ್ಡೆ ಕಾಲೇಜು ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳ ಪರಿಶ್ರಮ, ಸತತ ಪ್ರಯತ್ನದ ಫಲಕ್ಕೆ ಸಿಗುವ ಪುರಸ್ಕಾರವೇ ಯಶಸ್ಸು. ಈ ಯಶಸ್ಸು ನಿರಂತರವಾಗಿರಬೇಕಾದರೆ ಸಮಯ ಪ್ರಜ್ಞೆ, ಕೌಶಲ್ಯ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ಪಡೆದ ಯಶಸ್ಸು ಶಾಶ್ವತವಾಗಿರಲು ಸಾಧ್ಯ ಎಂದು ಜಿಲ್ಲಾ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ, ಕಾಪು ತಾಲೂಕು  ಶ್ರೀ ವಿಜಯ್ ಕುಮಾರ್, ಕೆ.ಎ.ಎಸ್., ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಹಾಗೂ ಬೆಂಗಳೂರು ಸಿಟಿ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪುರಸ್ಕಾರ ಬಹುಮಾನಕ್ಕಾಗಿ ಮಾಡಿದ ಪರಿಶ್ರಮ ಇಲ್ಲಿಗೆ ನಿಲ್ಲಿಸದೇ ನಿರಂತರ ಪ್ರಯತ್ನವಿರಲಿ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ  ವೀಣಾ ವಿ. ಭಟ್ ಸ್ವಾಗತಿಸಿ, ರೇಷ್ಮಾ ಶೆಟ್ಟಿ ವಂದಿಸಿದರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣಾ ಎಮ್. ಪೂಜಾರಿ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಯೋಗೀಶ್ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಸ್ಪರ್ಧೆಗಳ ಬಹುಮಾನಿತರ ಪಟ್ಟಿಯನ್ನು ಆಡಳಿತ ನಿಕಾಯಕರಾದ ರಕ್ಷಿತ್ ರಾವ್ ಗುಜ್ಜಾಡಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ವಿನಯಾ ವಿ. ಶೆಟ್ಟಿ, ಅಕ್ಷಯ್ ಕುಮಾರ್ ವಾಚಿಸಿದರು. ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುರೇಖಾ ಆಚಾರ್ಯ ಸನ್ಮಾನಿತರ ಪಟ್ಟಿ ವಾಚಿಸಿದರು. ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅವಿತಾ ಕೊರೆಯಾ ನಿರೂಪಿಸಿದರು. ವಿದ್ಯಾರ್ಥಿನಿ ಮನೀಷಾ ಪ್ರಾರ್ಥಿಸಿದರು.  

ಅಂತಿಮ ಬಿ.ಕಾಂ. (ಇ) ಪ್ರಥಮ ಸಮಗ್ರ ಪುರಸ್ಕಾರ ಪಡೆದರೆ, ಅಂತಿಮ ಬಿಬಿಎ ದ್ವಿತೀಯ ಸಮಗ್ರ ಪುರಸ್ಕಾರ ಮತ್ತು ದ್ವಿತೀಯ ಬಿಬಿಎ ತೃತೀಯ ಸಮಗ್ರ ಪ್ರಶಸ್ತಿ ಪಡೆದರು.