ಕ್ರಿಯಾಶೀಲತೆ, ಏಕಾಗ್ರತೆ ಮತ್ತು ದೃಢನಿಶ್ಚಯ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ: ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ “ಒಲಿವ್ ಗ್ರೀನ್ ಟು ಬ್ಯೂಟಿ ಕ್ವೀನ್ – ಎ ಜರ್ನಿ ವಿದಿನ್” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವಗಳು, ಎದುರಿಸಿದ ಸವಾಲುಗಳು, ವೈಫಲ್ಯಗಳು ಹಾಗೂ ಸಾಧನೆಗಳನ್ನು ಹಂಚಿಕೊಂಡರು. ಸಂಪೂರ್ಣ ಪುರುಷ ಸೈನಿಕರಿಂದ ಕೂಡಿದ ಘಟಕದಲ್ಲಿ ಮಹಿಳಾ ಅಧಿಕಾರಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು, ಆದರೆ ಆ ಸವಾಲನ್ನು ಸ್ವೀಕರಿಸಿ ಜಯಿಸಿದ ಪರಿ, ಸದಾ ಪ್ರೇರಣಾದಾಯಕ ಎಂದರು. ಯಶಸ್ಸು ಸಾಧಿಸಲು ಏಕಾಗ್ರತೆ, ದೃಢನಿಶ್ಚಯ ಮತ್ತು ಕ್ರಿಯಾಶೀಲತೆ ಅಗತ್ಯವೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಗಿಲ್ ಯುದ್ಧದ ಅವಧಿಯಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಸೇವೆ ಸಲ್ಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಕರ್ತವ್ಯದ ವೇಳೆ ಗಂಭೀರವಾಗಿ ಗಾಯಗೊಂಡರೂ ತಮ್ಮ ಶಸ್ತ್ರಾಸ್ತ್ರ ನೆಲಕ್ಕೆ ಬೀಳದಂತೆ ಕಾಪಾಡಿಕೊಂಡ ನಿದರ್ಶನವನ್ನು ವಿವರಿಸಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮಹಿಳೆಯರು ತಮ್ಮನ್ನು ಸಾಬೀತುಪಡಿಸಲು ಕೃತಕ ಪುರುಷತ್ವದ ಗುಣಗಳನ್ನು ಅಳವಡಿಸಿಕೊಳ್ಳುವ ಬದಲು ತಮ್ಮತನವನ್ನು ಸ್ವೀಕರಿಸಿ ಮತ್ತಷ್ಟು ಬಲಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳಾ ಸೇನಾ ಅಧಿಕಾರಿಗಳ ಸೇವಾ ಅವಧಿಯನ್ನು 10 ವರ್ಷಗಳಿಂದ 14 ವರ್ಷಗಳಿಗೆ ವಿಸ್ತರಿಸುವ ಹೋರಾಟದಲ್ಲಿಯೂ ತಾವು ಪಾತ್ರವಹಿಸಿದ್ದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅವರ ಜೀವನಗಾಥೆ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣೆದಾಯಕ. ವಿಮರ್ಶೆ ಮತ್ತು ತಿರಸ್ಕಾರಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಾರ್ವಜನಿಕ ಅಭಿಪ್ರಾಯಗಳಿಗೆ ಮಣಿಯದೆ ತಮ್ಮ ಗುರಿಯತ್ತ ದೃಢವಾಗಿ ಸಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಫೋರಂ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಸಕ್ಷಮ ಮಹಿಳಾ ಘಟಕದ ಸಂಚಾಲಕಿ ಡಾ ಗ್ರೀಷ್ಮಾ ವಿವೇಕ ಆಳ್ವ ಇದ್ದರು. ಶ್ರದ್ಧಾ ಹೆಗ್ಡೆ ನಿರೂಪಿಸಿ, ಫಾತಿಮಾ ವಂದಿಸಿದರು.
