ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಐಆರ್ಸಿಎಸ್ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಅವರು ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪಕರಾದ ಹೆನ್ರಿ ಡ್ಯೂನಾಂಟ್ ಅವರ ತ್ಯಾಗವನ್ನು ಸ್ಮರಿಸಿದರು. "ಡ್ಯೂನಾಂಟ್ ಅವರ ಮಾನವೀಯ ಆಲೋಚನೆಗಳೇ ಮೊದಲ ಜಿನೀವಾ ಒಪ್ಪಂದಕ್ಕೆ ನಾಂದಿಯಾಯಿತು. ಈ ಒಪ್ಪಂದ ಯುದ್ಧಭೂಮಿಯಲ್ಲಿ ಗಾಯಾಳು ಸೈನಿಕರು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿತ್ತು" ಎಂದು ಅವರು ವಿವರಿಸಿದರು.
ಪ್ರಸ್ತುತ ಜಾಗತಿಕ ಯುದ್ಧ ಪರಿಸ್ಥಿತಿ ಮತ್ತು ಪ್ರಕೃತಿ ವಿಕೋಪಗಳ ಹಿನ್ನೆಲೆಯಲ್ಲಿ ರೆಡ್ ಕ್ರಾಸ್ನ ಪಾತ್ರ ಅನಿವಾರ್ಯ ಎಂದು ಶ್ರೀ ಶೆಟ್ಟಿ ಪ್ರತಿಪಾದಿಸಿದರು. "ಯುದ್ಧ ಮತ್ತು ವಿಪತ್ತುಗಳ ಸಂದರ್ಭದಲ್ಲಿ ವೈದ್ಯಕೀಯ ನೆರವು, ಆಹಾರ, ಆಶ್ರಯ ಒದಗಿಸುವುದರ ಜೊತೆಗೆ, ಗಾಯಾಳುಗಳಿಗೆ ಚಿಕಿತ್ಸೆ, ಶರಣಾರ್ಥಿಗಳಿಗೆ ಸಹಾಯ ಮತ್ತು ಯಾವುದೇ ಭೇದಭಾವವಿಲ್ಲದೆ ಶಾಂತಿ-ಮಾನವೀಯತೆಯನ್ನು ಉತ್ತೇಜಿಸುವುದು ಸಂಸ್ಥೆಯ ಮೂಲ ಕರ್ತವ್ಯ" ಎಂದು ಅವರು ಹೇಳಿದರು.
"ಮಾನವೀಯತೆಯಲ್ಲಿ ಏಕತೆ" ಎಂಬ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪಸರಿಸಬೇಕು ಎಂದು ಕರೆ ನೀಡಿದ ಶ್ರೀ ಶೆಟ್ಟಿ, ಯುವ ಜನತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಂಕಷ್ಟದಲ್ಲಿರುವವರಿಗೆ ಸದಾ ನೆರವಾಗಬೇಕು ಎಂದು ಜಾಗೃತಿ ಮೂಡಿಸಿದರು.
ಐಆರ್ಸಿಎಸ್ ಕುಂದಾಪುರ ಘಟಕದ ಖಜಾಂಚಿ ಶಿವರಾಮ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್, ಅಧ್ಯಾಪಕ ಸಂಯೋಜಕಿ ಭಾರತಿ ಗಾಣಿಗ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಭಾವನಾ ಮತ್ತು ಪ್ರವೀಣ್ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನನ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
