ದಯೆ, ಸೇವೆ ಮತ್ತು ಸಮರ್ಪಣೆಯ ದೀಪವಾಗಿರಿ: ಡಾ. ಜುಡಿತ್ ಆಂಜೆಲಿಟ್ಟಾ ನೊರೊನ್ಹಾ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ನಸಿಂಗ್ ಒಂದು ಕೇವಲ ವೃತ್ತಿಯಲ್ಲ; ಅದು ಮಾನವೀಯತೆ, ಕರುಣೆ ಮತ್ತು ಸೇವೆಯ ಸಂಕೇತವಾದ ಮಹೋನ್ನತ ಜೀವನಪಥ ಎಂದು ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ನ ಡೀನ್ ಡಾ. ಜುಡಿತ್ ಆಂಜೆಲಿಟ್ಟಾ ನೊರೊನ್ಹಾ ಹೇಳಿದರು.

ಅವರು ಆಳ್ವಾಸ್ ಕಾಲೇಜ್ ಆಫ್ ನಸಿಂಗ್ ವತಿಯಿಂದ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯ ಅಂಗವಾಗಿ ನಡೆದ ದೀಪ ಪ್ರಜ್ವಲನೆ ಹಾಗೂ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಸಿಂಗ್ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಅವರು, ಇಂದು ನಿಮ್ಮ ಶೈಕ್ಷಣಿಕ ಜೀವನದ ಆರಂಭ ಮಾತ್ರವಲ್ಲ; ಇದು ಸೇವೆ, ಕಾಳಜಿ ಮತ್ತು ಮಾನವೀಯ ಮೌಲ್ಯಗಳಿಗೆ ಸಮರ್ಪಿತವಾದ ಜೀವನಯಾನದ ಆರಂಭ ಎಂದರು. 

ದೀಪ ಪ್ರಜ್ವಲನೆಯ ಮಹತ್ವವನ್ನು ವಿವರಿಸಿದ ಅವರು, ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವಾ ಮನೋಭಾವವನ್ನು ಸ್ಮರಿಸಿದರು. ಕ್ರಿಮಿಯನ್ ಯುದ್ಧದ ಸಂದರ್ಭದಲ್ಲಿ ರಾತ್ರಿ ಹೊತ್ತು ದೀಪ ಹಿಡಿದು ಗಾಯಾಳು ಸೈನಿಕರ ಸೇವೆ ಮಾಡಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ತ್ಯಾಗವೇ ಇಂದಿನ ದೀಪ ಪ್ರಜ್ವಲನೆ ಸಂಪ್ರದಾಯಕ್ಕೆ ಪ್ರೇರಣೆಯಾಗಿದೆ ಎಂದರು. 

ದೀಪವು ಕೇವಲ ಬೆಳಕಿನ ಸಂಕೇತವಲ್ಲ; ಅದು ಜ್ಞಾನ, ದಾರಿದೀಪ ಮತ್ತು ಸೇವಾ ಮನೋಭಾವದ ಪ್ರತೀಕ. ಇಂದು ನೀವು ಹಚ್ಚಿದ ಈ ದೀಪ ನಿಮ್ಮ ಬದುಕಿನಲ್ಲಷ್ಟು ಅಲ್ಲ, ನಿಮ್ಮ ಆರೈಕೆಗೆ ಬರುವ ಅನೇಕ ರೋಗಿಗಳ ಬದುಕಿನಲ್ಲೂ ಆಶಾಕಿರಣವಾಗಬೇಕು ಎಂದು ತಿಳಿಸಿದರು.

ಯಶಸ್ಸಿಗೆ ಯಾವುದೇ ಸುಲಭದ ದಾರಿ ಇಲ್ಲ. ಪರಿಶ್ರಮ, ನಿರಂತರ ಅಧ್ಯಯನ, ಶಿಸ್ತು ಮತ್ತು ಸಮರ್ಪಣೆಯ ಮೂಲಕವೇ ಸಾಧನೆ ಸಾಧ್ಯ ಎಂದರು. ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ದಾದಿಯರು. ಅವರ ಸ್ಪರ್ಶ, ಕಾಳಜಿ ಮತ್ತು ಸಮರ್ಪಣೆಯಿಂದಲೇ ಆರೋಗ್ಯಯುತ ಪರಿಸರ  ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಯಶಸ್ಸಿನ ನಾಲ್ಕು ಸೂತ್ರಗಳನ್ನು ಉಲ್ಲೇಖಿಸಿದ ಅವರು, ಜೀವನದಲ್ಲಿ ಸ್ಪಷ್ಟ ಗುರಿ, ನಿರಂತರ ಜ್ಞಾನಾರ್ಜನೆ, ಕಠಿಣ ಪರಿಶ್ರಮ ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯ ಅವಶ್ಯಕ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಸೃಜನಶೀಲತೆ, ಸತ್ಯನಿಷ್ಠ ಮತ್ತು ಧೈರ್ಯ ಈ ಮೂರು ಗುಣಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು.  ನಸಿಂಗ್ ವೃತ್ತಿಯಲ್ಲಿ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ಮೌಲ್ಯಗಳು ಹಾಗೂ ಸರಿಯಾದ ಮನೋಭಾವ ಅತ್ಯಂತ ಮುಖ್ಯವೆಂದು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನರ್ಸಿಂಗ್   ಕಾಲೇಜು ಸ್ಥಾಪನೆಯಾದ ದಿನದಿಂದಲೇ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಂದ ದೀಪ ಪ್ರಜ್ವಲನೆಯನ್ನು ನಡೆಸಿಕೊಂಡು ಬರುತ್ತಿರುವುದು  ಹೆಮ್ಮೆಯ ಸಂಗತಿ. ದೀಪ ಪ್ರಜ್ವಲನೆ ಕೇವಲ ಒಂದು ಸಂಪ್ರದಾಯವಲ್ಲ; ಅದು ಜ್ಞಾನ, ಸೇವೆ ಮತ್ತು ಮಾನವೀಯತೆಯ ಬೆಳಕನ್ನು ಸಮಾಜಕ್ಕೆ ಹಂಚುವ ಸಂಕೇತವಾಗಿದೆ. ಜೀವನದಲ್ಲಿ ಯಾವುದೇ ಒಳ್ಳೆಯ ಕಾರ್ಯವನ್ನು ಆರಂಭಿಸಲು ಸರಿಯಾದ ಸಮಯಕ್ಕಾಗಿ ಕಾಯುವ ಅಗತ್ಯವಿಲ್ಲ. 

ಕಾಲ ಯಾರನ್ನೂ ಕಾಯುವುದಿಲ್ಲ. ಅವಕಾಶಗಳು ಬಂದಾಗ ಧೈರ್ಯವಾಗಿ ಮುಂದೆ ಸಾಗಬೇಕು. ಒಂದು ಕೆಲಸವನ್ನು ಆರಂಭಿಸಲು ಬೇಕಾಗಿರುವುದು ಆತ್ಮವಿಶ್ವಾಸ ಮತ್ತು ಸಂಕಲ್ಪ ಎಂದು ಹೇಳಿದರು. ನಸಿಂಗ್ ವೃತ್ತಿ ಸೇವೆ, ಕರುಣೆ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ನಿಂತಿರುವ ಮಹತ್ವದ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ್ಯದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿ ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಗೆ ತೊಡಗುವ ಸಂಕಲ್ಪ ಮಾಡಿದರು.

ಪ್ರಾಂಶುಪಾಲರಾದ ಡಾ. ಯತಿಕುಮಾರ್ ಸ್ವಾಮಿಗೌಡ, ಶೈಲಾ ಮೆಂಡೀಸ್, ಉಪಪ್ರಾಂಶುಪಾಲೆ ರೇಣುಕಾ ಭಂಡಾರಿ ಇದ್ದರು. ಕವಿತಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.