ಕುಂದಾಪುರ: ಮಹಾಭಾರತ ಮತ್ತು ರಾಮಾಯಣದಲ್ಲಿ ಬರುವ ಉದಾತ್ತವಾದ ಮೌಲ್ಯಗಳು ಮತ್ತು ಪಾತ್ರಗಳ ಕುರಿತು ವಿದ್ಯಾರ್ಥಿಗಳು ತರ್ಕಬದ್ಧವಾಗಿ ಚಿಂತಿಸಬೇಕು. ವಿಕಾಸಶೀಲ ಮಹಾಕಾವ್ಯಗಳಾದ ಈ ಕೃತಿಗಳಲ್ಲಿ ಬರುವ ಪಾತ್ರಗಳ ಆದರ್ಶಗಳಲ್ಲಿ ಮೌಲ್ಯ ಅಡಗಿದೆ. ಈ ಮೌಲ್ಯಗಳೇ ಬದುಕಿಗೆ ದೀವಿಗೆ. ವಿದ್ಯಾರ್ಥಿಗಳು ಸಂವೇದನಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಹೊಸಂಗಡಿ ಪದವಿ - ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಣಜಿತ್ ಶೆಟ್ಟಿ ಮೂಡುಬಗೆ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ 8ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಖುಷಿ ಅತಿಥಿಗಳನ್ನು ಪರಿಚಯಿಸಿ, ರಾಜೇಶ್ವರಿ ಸ್ವಾಗತಿಸಿ, ನಮನ ಜಿ. ನಿರೂಪಿಸಿ, ನಿರೀಕ್ಷಾ ವಂದಿಸಿದರು.
