ಮೂಲತ: ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದ ಹೆರವಳ್ಳಿಯವರಾದ ಚಂದ್ರ ನಾಯ್ಕ್ ಅವರು ಮೊದಲಿಂದಲೂ ಮಕ್ಕಳ ಬಗೆಗೆ ಅತೀಯಾದ ಮಮತೆ. ತಾನು ಶಿಕ್ಷಕನಾಗಿ ಮಕ್ಕಳ ಭವಿಷ್ಯಕ್ಕೆ ದಾರಿಯಾಗಬೇಕು ಎಂಬ ಮಹದಾಸೆ ಹೊತ್ತವರು. 1989 -90 ರಲ್ಲಿ ಮೂಡಬಿದರೆಯ ಅಶ್ವತ್ತಪುರ ಶ್ರೀವಾಣಿವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದರು.
ಅಶ್ವತ್ತಪುರ ಶ್ರೀವಾಣಿವಿಲಾಸ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಸರ್ಕಾರಿ ಶಾಲೆಯ ಶಿಕ್ಷಕರಾಗಿ ನೇಮಕಗೊಂಡು 1991ರ ಜುಲೈ 04 ರಂದು ಕುಂದಾಪುರ ತಾಲ್ಲೂಕಿನ ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಪಾದಾರ್ಪಣೆ ಮಾಡಿದವರು.
1999 ರಿಂದ 2006 ರ ತನಕ ಬ್ರಹ್ಮಾವರ ವಲಯದ ಶಿರಿಯಾರ ಕೊಳ್ಕೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2006 ರಿಂದ 2009 ರ ತನಕ ಕಾರ್ಕಳ ಕ್ಷೇತ್ರದ ಶಿವಪುರ ನಾಯರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2009 ರಿಂದ 2014ರ ತನಕ ಕುಂದಾಪುರ ವಲಯದ ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 2014ರಿಂದ 2019 ರ ತನಕ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಸೇವೆ, ಬಳಿಕ 2019 ರಿಂದ 2023 ರ ತನಕ ಬೈಂದೂರು ವಲಯದ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 2023ರಿಂದ ಪ್ರಸ್ತುತ ಕೋಟೇಶ್ವರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿಭಾಗದ ಹಿರಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇವೆಯ ಆರಂಭದ ದಿನದಿಂದ ಇಂದಿನ ತನಕವೂ ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಅತ್ಯಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತ ಬಂದವರು. ತಾನು ಸೇವೆ ಸಲ್ಲಿಸಿದ ಪ್ರತಿ ಶಾಲೆಯಲ್ಲೂ ಸಾಕ್ಷಿ ಗುಡ್ಡೆಯನ್ನು ಬಿಟ್ಟು ಹೋಗಿದ್ದಾರೆ. ಸಂಘಟನಾ ಚತುರರಾಗಿರುವ ಚಂದ್ರ ನಾಯ್ಕ್ ಅವರು ಹೊಸ ಪರಿಕಲ್ಪನೆಯ ಮೂಲಕವೇ ಪ್ರತಿ ಶಾಲೆಯಲ್ಲೂ ಪ್ರಗತಿಯ ಶಖೆಯನ್ನು ಶುರು ಮಾಡಿದವರು. ಪ್ರತಿ ಶಾಲೆಯ ಪರಿಸರದ ವಿದ್ಯಾಭಿಮಾನಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು, ಊರವರು, ಶಾಲಾಭಿವೃದ್ಧಿ ಸಮಿತಿಯವರು ಶಾಲೆಗಳಿಗೆ ಚಂದ್ರ ನಾಯ್ಕ್ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾರೆ.
ಪ್ರಸ್ತುತ ಮಣಿಪಾಲದಲ್ಲಿ ಪತ್ನಿ ಮಕ್ಕಳೊಂದಿಗೆ ವಾಸ್ತವ್ಯವಿದ್ದಾರೆ. ಪತ್ನಿಯೂ ಮಣಿಪಾಲದ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಾದ ಪ್ರಜ್ವಲ್ ಮತ್ತು ಪ್ರಜ್ಞಾ ಎಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಪರೋಪಕಾರ, ಮತ್ತೋಬ್ಬರ ಏಳಿಗೆಯನ್ನೇ ಬಯಸುವ ಚಂದ್ರ ನಾಯ್ಕ್ ಅವರು ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಯಲ್ಲೂ ಸಮಾಜದಲ್ಲಿ ಅತ್ಯಂತ ಸಕ್ರೀಯರಾಗಿ ಎಲ್ಲರ ಮನ ಗೆದ್ದವರು. ಪೆರ್ಡೂರು ರೋಟರಿ ಕ್ಲಬ್ ಮೂಲಕ ಸದ್ದಿಲ್ಲದೆ ಜನಸೇವೆ ಮಾಡಿದವರು. ಸೂರಿಲ್ಲದವರಿಗೆ ಆಸರೆಯಾದವರು. ಸಾಮಾಜಿಕ, ಶೈಕ್ಷಣಿಕ, ಸಹಕಾರ, ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದವರು.
ನಾಡಿನ ವಿವಿಧ ಸಂಘಸಂಸ್ಥೆಯಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತ ಬಂದವರು. ಪ್ರಸ್ತುತ ಶತಮಾನೋತ್ತರ ಸಂಭ್ರಮದ ಕೋಟೇಶ್ವರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಚಂದ್ರ ನಾಯ್ಕ್ ಅವರು ಕಳೆದ 3 ವರ್ಷಗಳಿಂದ ಕೋಟೇಶ್ವರ ಕೆಪಿಎಸ್ ಶಾಲೆಯಲ್ಲಿ ಸಲ್ಲಿಸಿದ ಅಪಾರ ಜನಮನ್ನಣೆಯ ಸೇವೆಯನ್ನು ಕೋಟೇಶ್ವರದ ಮನೆಮಂದಿ ಸ್ಮರಿಸುತ್ತಾರೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಹಮ್ಮಿ ಕೊಂಡ ಎಲ್ಲಾ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿ ಊರವರಿಗೆ, ಹಳೇ ವಿದ್ಯಾರ್ಥಿಗಳಿಗೆ, ವಿವಿಧ ಸಮಿತಿಯವರಿಗೆ, "ಊರು ಮೆಚ್ಚಿದ ಮುಖ್ಯೋಪಾಧ್ಯಾಯ " ಆಗಿರುವುದು ಅವರ ಸೇವೆ ಸಲ್ಲಿಸಿ ಎಲ್ಲಾ ಶಾಲೆಗಳಿಗೂ ಗೌರವವಾಗಿದೆ.
ಇದೇ ಮೇ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತರಾಗುವ ಅಪರೂಪದ ವ್ಯಕ್ತಿತ್ವದ ಚಂದ್ರ ನಾಯ್ಕ್ ಅವರನ್ನು ವಿಶಿಷ್ಠ ರೀತಿಯಲ್ಲಿ ಸಾರ್ವಜನಿಕವಾಗಿ ಗೌರವಿಸಿ ಬೀಳ್ಕೊಡಲು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಹಳೇ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ ಮತ್ತು ಪೋಷಕ ಸಮಿತಿಯು ಚಂದ್ರ ನಾಯ್ಕ್ ಅವರ ಸೇವಾವಧಿಯ ಶಾಲೆಗಳ ಒಗ್ಗೂಡುವಿಕೆಯಿಂದ ಇದೇ ಮೇ.09 ರಂದು ಸಂಜೆ ಕೆಪಿಎಸ್ ಕೋಟೇಶ್ವರದ ಶ್ರೀ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಾವ್ ರಂಗಮಂಟಪದಲ್ಲಿ " ಬೆಳದಿಂಗಳು ಚಂದ್ರ ನಾಯ್ಕ್ ಎಚ್ " ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಸಭಾಧ್ಯಕ್ಷತೆ ವಹಿಸುವರು. ಮಾಜಿ ಮಂಡಲ ಪ್ರಧಾನರಾದ ಉಡುಪಿ ತಾಲ್ಲೂಕಿನ ಪೆರ್ಡೂರು ಶಾಂತರಾಮ ಸೂಡ ಶುಭಶಂಸನೆ ಮಾಡುವರು. ಕೆಪಿಎಸ್ ಕೋಟೇಶ್ವರದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಕೋಟೇಶ್ವರ ಶ್ರೀಧರ ವಿಠ್ಠಲ ಕಾಮತ್, ಕೋಟೇಶ್ವರ ಡಾ. ಎನ್.ಆರ್. ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಭಾಸ್ಕರ ಆಚಾರ್ಯ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಕೊಳ್ಕೆಬೈಲು ರವೀಂದ್ರ ನಾಥ ಶೆಟ್ಟಿ, ಉದ್ಯಮಿ ಶಂಕರ ಕಾಮತ್ ಕೋಟೇಶ್ವರ, ಕೆಪಿಎಸ್ ಕೋಟೇಶ್ವರದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮುಂತಾದವರು ಚಂದ್ರ ನಾಯ್ಕ್ ಅವರನ್ನು ಗೌರವಿಸುವರು. ಕೋಟೇಶ್ವರ ಮತ್ತು ಉಡುಪಿ ಜಿಲ್ಲೆಯ ವಿವಿದೆಡೆಯ ಗಣ್ಯರು, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು, ಚಂದ್ರ ನಾಯ್ಕ್ ಅವರ ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ " ಚಂದ್ರ ನಾಯ್ಕ್ ಅವರ ಬೆಳದಿಂಗಳ ಅಭಿನಂದನಾ ಸಂಭ್ರಮ " ಕ್ಕೆ ಸಾಕ್ಷಿಯಾಗುವರು.
ಆನಗಳ್ಳಿ ಶಾಲೆಯಲ್ಲಿ ಸ್ಕೌಟ್ ಗೈಡ್ ಮತ್ತು ವಿಜ್ಞಾನ ಶಿಕ್ಷಕರಾಗಿ ಮೆಚ್ಚುಗೆ ! ಕುಂದಾಪುರ ವಲಯದ ಆನಗಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಪಾದಾರ್ಪಣೆ ಮಾಡಿ ಆರಂಭದ ಹಂತದಲ್ಲೇ ಜನಮೆಚ್ಚುಗೆಯನ್ನು ಪಡೆದವರು. ಸ್ಕೌಟ್ ಗೈಡ್ ಶಿಕ್ಷಕರಾಗಿ ಮತ್ತು ವಿಜ್ಞಾನ ಶಿಕ್ಷಕರಾಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿ, ವಿದ್ಯಾರ್ಥಿಗಳ, ಪೋಷಕರರ, ಹಳೇ ವಿದ್ಯಾರ್ಥಿಗಳ ಮತ್ತು ಊರ ವಿದ್ಯಾಭಿಮಾನಿಗಳ ನೆಚ್ಚಿನ ಶಿಕ್ಷಕರಾಗಿದ್ದರು.
