ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ


ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: ಸ್ವಾಮಿ ವಿವೇಕಾನಂದರು ಹೇಳಿದಂತೆ ನಮ್ಮ ಬದುಕನ್ನು ರೂಪಿಸುವ ಶಿಲ್ಪಿಗಳು ನಾವೇ. ಶಾಲಾ-ಕಾಲೇಜು ಶಿಕ್ಷಣದಿಂದ ಶೇಕಡಾ 25ರಷ್ಟು ಮಾತ್ರ ಪ್ರಯೋಜನ ಪಡೆಯಬಹುದು. ಉಳಿದ ಎಲ್ಲವೂ ನಮ್ಮ ಅನುಭವದಿಂದ ಪಡೆಯಬೇಕು. ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಅನ್ನುವುದನ್ನು ನಾವೇ ನಿರ್ಧಾರ ಮಾಡಬೇಕು ಎಂದು ಶಿವಮೊಗ್ಗದ ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಎ.ಕೆ. ಶ್ರೀನಿವಾಸ ಮೂರ್ತಿ ಹೇಳಿದರು.

ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಾನು ಬಿ.ಎಸ್ಸಿ. ಕೃಷಿಯಲ್ಲಿ ಪದವಿ ಮಾಡಿ, ಏರ್ಫೋರ್ಸ್, ಬ್ಯಾಂಕಿನಲ್ಲಿ ಉದ್ಯೋಗಾವಕಾಶ ಸಿಕ್ಕರೂ, ಅದನ್ನು ಬಿಟ್ಟು ಅಪ್ಪನೊಂದಿಗೆ ಕೃಷಿಯೊಂದಿಗೆ ಆಯುರ್ವೇದ ಕ್ಷೇತ್ರವನ್ನು ಆಯ್ದುಕೊಂಡೆ. ಈಗ 500 ಎಕರೆ ಪ್ರದೇಶದಲ್ಲಿ ನಮ್ಮ ಅಮೃತ್ ನೋನಿ ಉತ್ಪನ್ನಕ್ಕೆ ಬೇಕಾದ ಎಲ್ಲಾ ಔಷಧೀಯ ಹಣ್ಣು, ಸಸ್ಯಗಳನ್ನು ಬೆಳೆಸುತ್ತಿದ್ದೇವೆ. 2 ಸಾವಿರಕ್ಕೂ ಮಿಕ್ಕಿ ಮಂದಿ ಕೆಲಸ ಮಾಡುತ್ತಿದ್ದಾರೆ. 5 ರಾಜ್ಯಗಳಲ್ಲಿ ನಮ್ಮ ಘಟಕಗಳಿವೆ. ಅಂದರೆ ಶಿಕ್ಷಣದಿಂದ ಕೇವಲ ಉದ್ಯೋಗ ಪಡೆಯುವುದಷ್ಟೇ ಅಲ್ಲ, ಜೀವನ ಸಾರ್ಥಕ ಪಡಿಸುವತ್ತ ಯುವ ಸಮುದಾಯ ಪ್ರಯತ್ನ ಪಡಬೇಕು ಎಂದರು.

ಇನ್ನೋರ್ವ ಅತಿಥಿ ಜಿ.ಎಸ್. ಶಾಮಿಲಿ "ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಶಾಮಿಲಿ ಶಂಕರ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಅಂಕಗಳಿಕೆಯೊಂದೇ ಅಲ್ಲ, ಬದುಕಿಗೆ ಭವಿಷ್ಯದ ಸಾಧನೆಗೆ ಬೇಕಾದ ಕೌಶಲ, ನಾಯಕತ್ವ ಗುಣ, ಶಿಸ್ತನ್ನು ಕಲಿಸುವುದು ಸಹ ಶಿಕ್ಷಣದ ಭಾಗ. ಕಾಲೇಜಿನ ಅದ್ಭುತ ಕ್ಷಣಗಳನ್ನು ಆನಂದಿಸಿ, ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು, ಮುನ್ನಡೆಯಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿದರು. ಇದೇ ಸಂದರ್ಭ ಮಂಗಳೂರು ವಿ.ವಿ. ಮಟ್ಟದಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಶ್ರೇಯಾ, ಸುಹಾನಿ, ನಿಖಿತಾ, ಶೃದ್ಧಾ ಆರ್. ಇವರನ್ನು ಸನ್ಮಾನಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬಾಂಡ್ಯ, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ನಾರಾಯಣ್ ನಾಯಕ್ ನೇರಳಕಟ್ಟೆ, ಕೆ.ಸಿ. ರಾಜೇಶ್, ರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಶ್ರೇಯಾ ತಂದೆ ಶೀನಾ ಪೂಜಾರಿ ಮುದೂರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಶ್ರೀಶಾಂತ್ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಶೆಟ್ಟಿ ಹಾಗೂ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಣಮ್ ಆರ್. ಅತಿಥಿಗಳನ್ನು ಪರಿಚಯಿಸಿದರು. ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ ಸಾಧಕರ ಪಟ್ಟಿ ವಾಚಿಸಿದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಕರಾದ ಪೂಜಾ ಕುಂದರ್ ನಿರೂಪಿಸಿ, ಕಾರ್ಯಕ್ರಮ ಸಂಯೋಜಕ ಮಹೇಶ್ ಕುಮಾರ್ ವಂದಿಸಿದರು.