ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಎ.29: ತಾಲೂಕಿನ ತ್ರಾಸಿ - ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಭೀಕರ ಅಪಘಾತದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.
ಬೈಂದೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬಸ್, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಮತ್ತು ಲಾರಿಗೆ ನಿಯಂತ್ರಣ ತಪ್ಪಿ ಮಧ್ಯಾಹ್ನ 1:30ರ ಸಮಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಬಸ್ಸಿನ ಹೆಚ್ಚುವರಿ ಚಾಲಕ ರಘು, ಕ್ಲೀನರ್ ರಂಗನಾಥ್ ಹಾಗೂ ಅಡುಗೆ ಸಹಾಯಕ ಹೇಮಂತ್ ಮೃತಪಟ್ಟಿದ್ದಾರೆ. ಇವರ ಜೊತೆಯಲ್ಲಿದ್ದ ವಿದ್ಯಾರ್ಥಿಯೋರ್ವನಿಗೂ ಗಂಭೀರ ಗಾಯವಾಗಿದೆ.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ರಂಭಾಪುರಿ ಕಾಲೇಜಿನಿಂದ ಅಂತಿಮ ವರ್ಷದ ಬಿ.ಕಾಂ
ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ 3 ದಿನಗಳ
ಪ್ರವಾಸಕ್ಕೆ ಹೊರಟ್ಟಿದ್ದರು. ನಿನ್ನೆ ಹೊನ್ನಾವರದಲ್ಲಿ ಪ್ರವಾಸಿ ಮುಗಿಸಿ ಅಲ್ಲಿಯೇ ಉಳಿದು, ಇಂದು ಉಡುಪಿ ಕಡೆಗೆ ಹೊರಟಿದ್ದರು. ಮರವಂತೆಯಲ್ಲಿ ಬಸ್
ನಿಲ್ಲಿಸಿ ಬೀಚ್‌ಗೆ ತೆರಳಿ ಅಲ್ಲಿಂದ ಪ್ರಯಾಣ ಮುಂದುವರಿಸುವ ವೇಳೆ ಏಕಾಏಕಿ ಈ ಅವಘಡ ನಡೆದಿದೆ. ಮರವಂತೆಯಿಂದ ಒಂದು ಕಿ.ಮೀ ಸಾಗಿದ್ದ
ಬಸ್ಸು ಏಕಾಎಕಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರಿನ ಮುಂಭಾಗಕ್ಕೆ ಡಿಕ್ಕಿಯಾಗಿದೆ. ಬಳಿಕ
ಅಲ್ಲೇ ಎದುರಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿ ನಿಂತಿದೆ. ಅಪಘಾತದ ತೀವ್ರತೆಗೆ ನಾಲ್ವರು
ಗಂಭೀರ ಗಾಯಗೊಂಡಿದ್ದರು. ಅಪಘಾತ ನಡೆದ ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದು
ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತು. ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳನ್ನು ಕುಂದಾಪುರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರ
ಗಾಯಗೊಂಡವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
54 ವಿದ್ಯಾರ್ಥಿಗಳು, 4 ಮಂದಿ ಉಪನ್ಯಾಸಕರು, ಸಹಾಯಕ ಸಿಬ್ಬಂದಿಗಳು, ಅಡುಗೆಯವರು, ಕ್ಲೀನರ್ ಬಸ್ಸಿನಲ್ಲಿದ್ದರು. ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಗಾಯಗೊಂಡ 3 ವಿದ್ಯಾರ್ಥಿಗಳಿಗೆ ಚಿಕ್ಕ ಸರ್ಜರಿ ಮಾಡಲಾಗಿದ್ದು, ಉಳಿದೆಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಶಾಸಕರಿಂದ ರಕ್ಷಣಾ
ಕಾರ್ಯ, ಆಸ್ಪತ್ರೆ ಭೇಟಿ:
ಘಟನಾ ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಧಾವಿಸಿ ಬಂದು ಸ್ಥಳಿಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ಜೊತೆಯಾದರು. ಸ್ವತಃ ಬಸ್ ಏರಿ
ವಿದ್ಯಾರ್ಥಿಗಳ ಲಗೇಜುಗಳನ್ನು ಕೆಳಕ್ಕಿಳಿಸುವ ಕಾರ್ಯಕ್ಕೆ ಮುಂದಾದರು. ಸಂಸದ ಬಿ.ವೈ.
ರಾಘವೇಂದ್ರ ಅವರು ದೂರವಾಣಿ ಮೂಲಕ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು
ಶಾಸಕರೊಂದಿಗೆ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಸಂತೈಸಿದರು.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ, ವೃತ್ತ ನಿರೀಕ್ಷಕ
ಶಿವಕುಮಾರ ಬಿ ಗಂಗೊಳ್ಳಿ
ಪೊಲೀಸ್ ಠಾಣಾ ಪಿ.ಎಸ್.ಐ ಪವನ್ ನಾಯಕ್ (ಕಾ & ಸು) ಹಾಗೂ ಸುದರ್ಶನ್ ಬಿ.ಎನ್ (ತನಿಖೆ) ಭೇಟಿ ನೀಡಿ ಮಾಹಿತಿ ಪಡೆದರು.
ಅಫಘಾತದಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಗಂಗೊಳ್ಳಿ
ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದೆ.
