ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಗಾಂಗ ದಾನ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಗಾಂಗ ದಾನ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು. 

ದೇಹದಾನದ ಮಹತ್ವದ ಕುರಿತು ಮಾತನಾಡಿದ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಅಂಗಾಂಗ ಕಸಿ ವಿಭಾಗದ ಸಂಯೋಜಕರಾದ ಪ್ರೀತಿ ಶೆಟ್ಟಿ ಮಾತನಾಡಿ,  ಬದುಕಿರುವಾಗ ಕೆಲವು ಅಂಗಾಂಗವನ್ನು ದಾನ ಮಾಡಬಹುದು. ದೇಹದಾನ ಶ್ರೇಷ್ಠ ದಾನ. ಯಾಕೆಂದರೆ ಇನ್ನೋರ್ವರಿಗೆ ನೀವು ಬದುಕನ್ನು ನೀಡಿದಂತಹ ಪುಣ್ಯ ಸಲ್ಲುತ್ತದೆ. ಬೇರೆ ಬೇರೆ ಕಾರಣಕ್ಕೆ ಮರಣ ಹೊಂದಿದಾಗಲೂ ಅಂಗಾಂಗಳನ್ನು ದಾನ ಮಾಡಬಹುದು. ಆದರೆ ಬೇರೆ ಬೇರೆ ಅಂಗಾಂಗಗಳಿಗೆ  ಸಮಯದ ಮಿತಿ ಇರುತ್ತದೆ. ಉದಾಹರಣೆಗೆ ಹೃದಯವನ್ನು ಇನ್ನೊಂದು ದೇಹಕ್ಕೆ ನೀಡಲು ಕೇವಲ 4-5 ಗಂಟೆ ಮಾತ್ರವೇ ಇರುತ್ತದೆ. ಇವೆಲ್ಲವನ್ನೂ ಗಮನದಲ್ಲಿರಿಕೊಳ್ಳಬೇಕು. ಅಲ್ಲದೇ ದೇಹದಾನದ ಕುರಿತು ಕಾನೂನುಗಳನ್ನು ಮತ್ತು ಪ್ರಕ್ರಿಯೆಗಳ ಕುರಿತು ವಿವರವಾಗಿ ತಿಳಿಸಿದರು. 

ಕ್ಯಾನ್ಸರ್ ಜಾಗೃತಿ ಕುರಿತು ಮಾತನಾಡಿದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಸರ್ಜಿಕಲ್ ಅಂಕೋಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಖಿಲ್ ಪಾಲೋಡ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿದೆ. ಹಾಗಾಗಿ ಅದು ಬರದಂತೆ ತಡೆಯುವ ಮಾರ್ಗಗಳ ಕುರಿತು ಜಾಗೃತಿ ಮೂಡಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರದ ಛೇರ್ಮನ್ ಜಯಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್, ಭಂಡಾರ್ಕಾರ್ಸ್ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ವಿದ್ಯಾರಾಣಿ ಉಪಸ್ಥಿತರಿದ್ದರು. 

ವಿದ್ಯಾರ್ಥಿನಿಯರಾದ ಅನಿಷಾ ಲೆವಿಟ್ ಕಾರ್ಯಕ್ರಮದ ನಿರೂಪಿಸಿ, ವೈಷ್ಣವಿ ಸ್ವಾಗತಿಸಿ, ಅದೀಬಾ ವಂದಿಸಿದರು.