ಅಡಿಗರ ಸ್ಮಾರಕ ನಿರ್ಮಾಣವೇ ತನಗೆ ನೀಡಬಹುದಾದ ಗುರುದಕ್ಷಿಣೆ: ಸಮ್ಮೇಳನಾಧ್ಯಕ್ಷ ಎಸ್. ಜನಾರ್ದನ ಮರವಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೊಗೇರಿ ಗೋಪಾಲಕೃಷ್ಣ ಅಡಿಗರು ದೇಶದ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ನಿಲ್ಲುವ ಸಾಹಿತ್ಯ ಸಾಧಕ. ಇದೇ ಫೆಬ್ರವರಿ ಹದಿನೆಂಟಕ್ಕೆ ಅಡಿಗರಿಗೆ ನೂರು ತುಂಬಿದೆ. ಆದರೆ ಅವರ ನೆನಪಿಗಾಗಿ ಹುಟ್ಟೂರಿನಲ್ಲಿ ಏನೂ ಇಲ್ಲ ಎಂಬಂತಾಗಿದೆ. ಹಾಗಾಗಿ ನನ್ನನ್ನು ಗುರು ಎಂದು ಒಪ್ಪಿಕೊಳ್ಳುವ ವಿವಿಧ ಕ್ಷೇತ್ರದ ಗಣ್ಯರಿಂದ ಗುರುದಕ್ಷಿಣೆಯಾಗಿ ಅಡಿಗರ ಸ್ಮಾರಕ ನಿರ್ಮಾಣವಾಗುವುದನ್ನು ಬಯಸುತ್ತೇನೆ ಎಂದು ಬೈಂದೂರು ತಾಲೂಕು ಚೊಚ್ಚಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು.

ಅವರು ಶನಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಘಟಕದ ಆಶ್ರಯದಲ್ಲಿ ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜು ಸಭಾಭವನದ ಪ್ರೋ. ಬಿ. ಎಚ್. ಶ್ರೀಧರ ವೇದಿಕೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನ ಸಾಧನಾ - ೨೦೧೯ನ್ನು ಉದ್ದೇಶಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಕುಪ್ಪಳಿಯಲ್ಲಿ ಕುವೆಂಪು, ಧಾರವಾಡದಲ್ಲಿ ಬೇಂದ್ರೆ, ಮತ್ತು ಕೋಟದಲ್ಲಿ ಕಾರಂತ ಹೆಸರಿನಲ್ಲಿ ಸ್ಮಾರಕಗಳಾಗಿವೆ. ಅದರಂತೆ ಮೊಗೇರಿಯಲ್ಲಿಯೂ ಆ ಪ್ರಯತ್ನ ಚುರುಕು ಕಂಡುಕೊಳ್ಳಬೇಕಿದೆ. ಕೆರ್ಗಾಲು ಗ್ರಾಮದ ಮೊಗೇರಿ ಕನ್ನಡದ ಎಲ್ಲೆಯನ್ನೂ ಮೀರಿ ಹರಡಿಕೊಂಡಿದೆ. ಕನ್ನಡ ಕಾವ್ಯಲೋಕದ ಮೇರು ಪ್ರತಿಭೆ. ಹೊಸ ನಾಡಿನ ಕನಸು ಕಂಡ ಗೋಪಾಲಕೃಷ್ಣ ಅಡಿಗರ ನೆಲ ಅದು. ಅಡಿಗರು ತಮ್ಮ ಹೆಸರಿನೊಂದಿಗೆ ಮೊಗೇರಿಯ ಮಣ್ಣಿನ ವಾಸನೆಯನ್ನು ಎಲ್ಲೆಡೆಗೆ ಪಸರಿಸಿದರು. ಮೊಗೇರಿಯನ್ನು ಗಾಢವಾಗಿ ಪ್ರೀತಿಸಿದರು. ನವೋದಯ ಕಾಲದಲ್ಲಿ ಅವರು ಬರವಣಿಗೆ ಆರಂಭಿಸಿದರು. ಎರಡನೆಯದಾದ ನವ್ಯವನ್ನು ಅವರೇ ಸೃಜಿಸಿದರು. ಆ ಬಳಿಕದ ನವ್ಯೋತ್ತರದಲ್ಲೂ ಸೃಜನಶೀಲತೆ ಮೆರೆದರು. ಆದರೆ ನಾಲ್ಕನೆಯ ಘಟ್ಟ ಎಂದು ಗುರುತಿಸಬಹುದಾದ ಅಡಿಗರಿಲ್ಲದ ಅಡಿಗೋತ್ತರದ ಕಾಲದಲ್ಲೂ ಅವರು ಪ್ರಸ್ತುತರಾಗಿರುವುದು ಒಂದು ಅಪೂರ್ವದ ವಿದ್ಯಮಾನ ಮಾತ್ರವಲ್ಲ ಎಂದು ಬಣ್ಣಿಸಿದರು.

ನಾನು ನನ್ನ ವೈಯಕ್ತಿಕ ಆಕಾಂಕ್ಷೆಯ ಈಡೇರಿಕೆಗಾಗಿ ಯಾರಿಗೂ ಎಂದೂ ಮುಜುಗರ ಉಂಟು ಮಾಡಿಲ್ಲ. ಆದರೆ ಈಗ ಈ ಎಲ್ಲರಿಂದ ಮೊಗೇರಿ ಗೋಪಾಲಕೃಷ್ಣ ಅಡಿಗ ಸ್ಮಾರಕವನ್ನು ಗುರುದಕ್ಷಿಣೆಯಾಗಿ ಬಯಸುತ್ತಿದ್ದೇನೆ. ಆ ನಿಟ್ಟಿನಲ್ಲಿ ಪ್ರ್ರಾಮಾಣಿಕ ಒಲವು, ಸಾಧಿಸುವ ಸಾಮರ್ಥ್ಯ ಮತ್ತು ಛಲ ಹೊಂದಿರುವ ಎಲ್ಲರೂ ನನ್ನ ಈ ಕೋರಿಕೆಯನ್ನು ಈಡೇರಿಸುವರು ಎಂಬ ಭರವಸೆ ನನಗಿದೆ ಎಂದರು.

ಭಾಷೆ ಮತ್ತು ಕಲಿಕಾ ಮಾಧ್ಯಮ:
ಒಂದು ಕಾಲದಲ್ಲಿ ಇಂಗ್ಲಿಷ್ ಕಲಿಕೆಯ ಬಗೆಗೇ ಈ ದೇಶದಲ್ಲಿ ಕೆಲವು ವರ್ಗಗಳ ವಿರೋಧ ಇತ್ತು. ವಿದೇಶಗಳಲ್ಲಿ ಉದ್ಯೋಗದ ಬಾಗಿಲು ಉದಾರವಾಗಿ ತೆರೆಯಲ್ಪಟ್ಟ ಬಳಿಕ ಇಂಗ್ಲಿಷ್ ಮಾಧ್ಯಮ ಬೇಡ ಎಂಬ ಧೋರಣೆಗೆ ಮಾತ್ರ ಸ್ವಾಗತ ದೊರೆಯಿತು. ಸರ್ಕಾರಗಳೂ ಅಡ್ಡಗೋಡೆಯ ಮೇಲೆ ದೀಪ ಇರಿಸಿದಂತೆ ವರ್ತಿಸಿದುವು. ಜನರ ಆರ್ಥಿಕ ಸ್ಥಿತಿ ಸುಧಾರಿಸಿದಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಸಮಾನತೆ ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿತು. ನ್ಯಾಯಾಲಯಗಳು ಭಾಷಾಮಾಧ್ಯಮದ ಆಯ್ಕೆಯನ್ನು ವ್ಯಕ್ತಿಯ ಸ್ವಾತಂತ್ರ್ಯದ ಹಕ್ಕಾಗಿ ನಿರ್ವಚನ ಮಾಡಿದುವು. ಒಟ್ಟು ವಾತಾವರಣ ಹೇಗಾಯಿತೆಂದರೆ ಆಂಗ್ಲ ಮಾಧ್ಯಮ ಶಿಕ್ಷಣವು ಗುಣಮಟ್ಟದ ಶಿಕ್ಷಣದೊಂದಿಗೆ ಸಮೀಕರಿಸಲ್ಪಟ್ಟಿತು. ಅಂತಹ ಭಾವನೆ ಪೋಷಕರನ್ನು ಅದರಿಂದ ಹಿಂದಕ್ಕೆ ಸೆಳೆಯುವ ಪ್ರಯತ್ನ ಫಲ ನೀಡದಷ್ಟು ಗಟ್ಟಿಗೊಂಡಿತು. 

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಗುಣಮಟ್ಟ ಮತ್ತು ಸೌಲಭ್ಯದ ದೃಷ್ಟಿಯಲ್ಲಿ ಬಹುಸಂಖ್ಯೆಯ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಡಿಮೆ ಇರದಿರುವುದು, ಅಧಿಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿನ ಗುಣಮಟ್ಟ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟಕ್ಕಿಂತ ಹೆಚ್ಚಿಲ್ಲದಿರುವುದು, ಅಲ್ಲಿನ ಶಿಕ್ಷಕರ ಆಂಗ್ಲ ಭಾಷೆಯ ಪ್ರೌಢಿಮೆ ಮತ್ತು ಬೋಧನಾ ಕೌಶಲ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ದುಡಿಯುವ ಶಿಕ್ಷಕರ ಆಂಗ್ಲ ಭಾಷಾ ಪ್ರೌಢಿಮೆ ಮತ್ತು ಅದನ್ನು ಬೋಧಿಸುವ ಕೌಶಲಕ್ಕಿಂತ ತೀರ ಹೆಚ್ಚಿಲ್ಲದಿರುವುದು ಕೂಡ ಪೋಷಕರ ಕಣ್ಣು  ತೆರೆಸಲಿಲ್ಲ. 

ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಗಳು : 
ಎಲ್ಲ ಭಾರತೀಯ ಭಾಷೆಗಳ ಕುಸಿತಕ್ಕೆ ಪ್ರಮುಖ ಕಾರಣವಾಗಬಹುದಾದ್ದು ಜನರಲ್ಲಿರುವ ಆಂಗ್ಲ ಭಾಷೆಯ ಕುರಿತಾದ ತಪ್ಪು ತಿಳಿವಳಿಕೆ. ಆ ಕಾರಣದಿಂದ ಹೆಚ್ಚುತ್ತಿರುವ ಅದರ ಪ್ರಭಾವ, ಕಲಿಕೆ ಹಾಗೂ ಬಳಕೆ. ಶಿಕ್ಷಣದ ವಾಣಿಜ್ಯೀಕರಣವೂ ಈ ಪ್ರವೃತ್ತಿಗೆ ತನ್ನ ಕೊಡುಗೆ ನೀಡುತ್ತಿದೆ. ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆ ಕಲಿಯಲು ಎಲ್ಲರೂ ಸ್ವತಂತ್ರರು. ಆದರೆ ಅದು ಮಾಧ್ಯಮವಾಗಬೇಕೇ, ಆದರೆ ಯಾವ ಹಂತದಿಂದ ಎಂಬ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳಬೇಕು. ಒಂದು ಭಾಷೆಯಲ್ಲಿ ಪ್ರಭುತ್ವ ಪಡೆಯಲು ಅದು ಕಲಿಕಾ ಮಾಧ್ಯಮವಾಗಬೇಕು ಎಂಬ ವಾದವನ್ನು ನಾನು ನಿರಾಕರಿಸುತ್ತೇನೆ. ಅದು ಆಧರಿಸಿರುವುದು ಅದಕ್ಕೆ ಪಠ್ಯಕ್ರಮದಲ್ಲಿ ನೀಡುವ ಮಹತ್ವ ಮತ್ತು ಅದನ್ನು ಕಲಿಸುವ ವಿಧಾನ ಎನ್ನುವುದು ನನ್ನ ದೃಢ ನಂಬಿಕೆ. 

ಕೆಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮಾಡಿರುವ ಆಂಗ್ಲ ಮಾಧ್ಯಮ ಕೆಜಿ ಮತ್ತು ಅನ್ಯ ತರಗತಿಗಳ ಆರಂಭ, ವಾಹನ ಸೌಕರ್ಯ ಸೃಷ್ಟಿ, ವಿವಿಧ ಪ್ರಲೋಭನೆಗಳೂ ನಿರೀಕ್ಷಿತ ಪರಿಣಾಮ ಬೀರಿಲ್ಲ. ಎಲ್ಲವೂ ಇದೇ ವೇಗದಲ್ಲಿ ಸಾಗಿದರೆ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗುವ ಮತ್ತು ಅವುಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಮಾತ್ರ ಉಳಿದುಕೊಳ್ಳುವ ದಿನ ದೂರದಲ್ಲಿಲ್ಲ ಎಂದೆನಿಸುತ್ತದೆ. 

ಸಾಂಸ್ಕೃತಿಕ ವಿಕೇಂದ್ರೀಕರಣ: 
ಭಾಷೆ ಹೇಗೆ ಮನುಷ್ಯನ ಜೀವನವನ್ನು ವ್ಯಾಪಕವಾಗಿ ಪ್ರಭಾವಿಸುತ್ತದೋ, ಅದರಿಂದ ಹುಟ್ಟುವ ಸಾಹಿತ್ಯವೂ ಅಂತಹ ಶಕ್ತಿ ಮತ್ತು ಸೌಂದರ್ಯವನ್ನು ಹೊಂದಿದೆ. ಭಾಷೆ ಸಂವಹನ, ಅರಿವು, ಮನೋಲ್ಲಾಸಕ್ಕೆ ಕಾರಣವಾದಂತೆ ಸಾಹಿತ್ಯವೂ ಆ ಕೆಲಸಮಾಡುತ್ತದೆ. ಓದು, ದರ್ಶನ, ಚಿಂತನದ ಇನ್ನೊಂದು ಆಯಾಮ ಸಮ್ಮೇಳನ, ಚರ್ಚೆ, ಗೋಷ್ಠಿ, ಇತ್ಯಾದಿ. 

ತಾಲ್ಲೂಕುಗಳ ವಿಭಜನೆ ಆಡಳಿತ ವಿಕೇಂದ್ರೀಕರಣಕ್ಕೆ ಕಾರಣವಾದಂತೆ ಸಾಹಿತ್ಯ ಚಟುವಟಿಕೆಗಳ ವಿಕೇಂದ್ರೀಕರಣಕ್ಕೂ ಕಾರಣವಾದ ವಿದ್ಯಮಾನಕ್ಕೆ ನಾವೆಲ್ಲ ಸಾಕ್ಷಿಗಳಾಗುತ್ತಿದ್ದೇವೆ. ಇದು ಗ್ರಾಮೀಣ ಭಾಗಕ್ಕೂ ವಿಸ್ತರಿಸಲ್ಪಡಬೇಕೆಂದು ನಾನು ಆಶಿಸುತ್ತೇನೆ. ಅದಕ್ಕೆ ಅಲ್ಲಿ ಪರಿಷತ್ತಿನ ಘಟಕ ಸ್ಥಾಪಿಸುವ ಅಗತ್ಯವಿಲ್ಲ. ಈಗ ಜಾರಿಯಲ್ಲಿರುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯ ನಿರ್ದೇಶಕ ತತ್ವಗಳು ಸ್ಥಳೀಯ ಸಮುದಾಯದ ಕಲೆ, ಸಂಸ್ಕೃತಿ, ಮತ್ತು ಪರಂಪರೆಗಳನ್ನು ರಕ್ಷಿಸುವುದು ಮತ್ತು ಕಾಪಾಡುವುದು ಗ್ರಾಮ ಪಂಚಾಯಿತಿಗಳ ಹೊಣೆ ಎಂದರೆ, ಗ್ರಾಮ ಪಂಚಾಯಿತಿಗಳ ಕಡ್ಡಾಯ ಪ್ರಕಾರ್ಯಗಳ ಪಟ್ಟಿಯಲ್ಲಿ ’ಸಾಂಸ್ಕೃತಿಕ ಹಬ್ಬಗಳನ್ನು, ಸಾಹಿತ್ಯ ಚಟುವಟಿಕೆಗಳನ್ನು ಮತ್ತು ಕ್ರೀಡೆಗಳನ್ನು ಸಂಘಟಿಸುವುದನ್ನು, ಅವುಗಳಿಗೆ ಉತ್ತೇಜನ ನೀಡುವುದನ್ನು ಹಾಗೂ ಅಲ್ಲಿನ ಜನರ ಪ್ರತಿಭೆ ಅಭಿವ್ಯಕ್ತಗೊಳ್ಳಲು ಅವಕಾಶ ಕಲ್ಪಿಸುವುದನ್ನು’ ಸೇರಿಸಲಾಗಿದೆ ಎಂದರು. 

► ಬೈಂದೂರು ತಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾರ್ದನಿಸಿದ ಕನ್ನಡದ ಅಸ್ಮಿತೆ, ಅಡಿಗರ ಸ್ಮಾರಕ ವಿಚಾರ - - https://bit.ly/2EvmLGy .