ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾರ್ದನಿಸಿದ ಕನ್ನಡದ ಅಸ್ಮಿತೆ, ಅಡಿಗರ ಸ್ಮಾರಕ ವಿಚಾರ

ನಮ್ಮತನ ಉಳಿಸಿಕೊಳ್ಳದ ಹೊರತು ಕನ್ನಡಕ್ಕೆ ಉಳಿವಿಲ್ಲ
ಬೈಂದೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಡಾ. ಜೆ. ಈಶ್ವರ ಭಟ್


ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಕೀಯರದ್ದು ಉತ್ತಮ, ನಮ್ಮದು ಅದಮ ಎಂಬ ಮನೋಭಾವ ಕನ್ನಡಿಗರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಿಸಿದೆ. ಭಾಷೆಯ ಮೇಲಿನ ಆಕ್ರಮಣ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳ ಮೇಲೆಯೂ ಆಗಿದೆ. ನಮ್ಮತನ ಉಳಿಸಿಕೊಳ್ಳದ ಹೊರತು ಕನ್ನಡಕ್ಕೆ ಉಳಿವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ. ಈಶ್ವರ ಭಟ್ ಹೇಳಿದರು.

ಅವರು ಶನಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಘಟಕದ ಆಶ್ರಯದಲ್ಲಿ ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜು ಸಭಾಭವನದ ಪ್ರೋ. ಬಿ. ಎಚ್. ಶ್ರೀಧರ ವೇದಿಕೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನ ಸಾಧನಾ - ೨೦೧೯ನ್ನು ಉದ್ಘಾಟಿಸಿ ಮಾತನಾಡಿದರು.

ಈವರೆಗೆ ಕನ್ನಡದ ನೂರಾರು ಸಾಹಿತ್ಯ ಸಮ್ಮೇಳನಗಳ ನಡೆದಿವೆ. ಆದರೆ ಈವರೆಗೂ ಕನ್ನಡ ಭಾಷಾ ಬಳಕೆಯ ಬಗೆಗೆ ಸ್ಪಷ್ಟ ನಿಲುವು ತಳೆಯಲು ಸಾಧ್ಯವಾಗಿಲ್ಲ ಎಂಬುದು ವಿಷಾದ ವ್ಯಕ್ತಪಡಿಸಿದ ಅವರು ಭಾಷೆ ಕೆಡುವುದರಲ್ಲಿ ದೃಷ್ಯ ಮಾಧ್ಯಮಗಳ ಪಾಲು ದೊಡ್ಡದಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಮನಸ್ಸಿನ ಸ್ವಚ್ಛತೆಗಾಗಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುವ ಅಗತ್ಯವಿದೆ. ನುಡಿಹಬ್ಬದ ಮೂಲಕ ನಾಡಪ್ರೇಮ, ದೇಶಪ್ರೇಮ ಮೂಡಿಸಲು ಸಾಧ್ಯವಾದವರೆ ಸಮ್ಮೇಳನ ಶ್ರಮ ಸಾರ್ಥಕ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡೋಲು ಬಾರಿಸಿ ಉದ್ಘಾಟಿಸಿ ಮಾತನಾಡಿ  ಕುಂದಾಪುರ ಕನ್ನಡದಷ್ಟು ಉತ್ಕೃಷ್ಟವದ ಕನ್ನಡವಿಲ್ಲ.   ಆದರೆ ಪಾಶ್ಚಾತ್ಯರ ಅನುಕರಣೆಯಿಂದ ಮಾತೃಭಾಷೆಯನ್ನು ಮರೆಯುತ್ತಿದ್ದೇವೆ. ಕುಂದಗನ್ನಡಕ್ಕೆ ಅಕಾಡೆಮಿ ಸ್ಥಾಪಿಸುವ ಅಗತ್ಯವಿದೆ. ನಮ್ಮ ಉತ್ತರಾಧಿಕಾರಿಗಳು ಉತ್ತಮ ಕನ್ನಡಿಗರಾಗಲಿ ಎಂದು ಆಶಿಸಿದರು. 

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರು ಸರ್ವಾಧ್ಯಕ್ಷ ಎಸ್. ಜನಾರ್ದನ ಮರವಂತೆ ಅವರಿಗೆ ಕನ್ನಡದ ಧ್ವಜವನ್ನು ಹಸ್ತಾಂತರಿಸಿದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ ಶೇಖರ ಅವರ ಶ್ರವಣದ ಬುಟ್ಟಿ ಹಾಗೂ ಕೀರ್ತಿರಾಜ್ ಹೆರಂಜಾಲು ಅವರ ಕಿವಿ-ಕೇಳುವುದಲ್ಲ ಕಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಸಾಹಿತಿ ಕೂ.ಗೋ ಭಟ್ ಅವರ ಪುಸ್ತಕಗಳನ್ನು ಅತಿಥಿಗಳಿಗೆ ವಿತರಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವಾಧ್ಯಕ್ಷ ಎಎಸ್‌ಎನ್ ಹೆಬ್ಬಾರ್, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಸಮ್ಮೇಳನದ ಅಧ್ಯಕ್ಷರನ್ನು ಗೌರವಿಸಿದರು. ಉದ್ಘಾಟಕರಾದ ಡಾ. ಜೆ. ಈಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಶಿಕ್ಷಣ ತಜ್ಞ ಎಸ್. ಜನಾರ್ದನ ಮರವಂತೆ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ, ಕಂಬದಕೋಣೆ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಗಣಪತಿ ಅವಭೃತ್, ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಭಟ್, ಬ್ರಹ್ಮಾವರ ತಾ. ಕಸಾಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಸ.ಪ.ಪೂ ಕಾಲೇಜು ಉಪ್ಪಂದ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ, ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭೋಗ್, ಬೈಂದೂರು ರೋಟರಿ ಅಧ್ಯಕ್ಷ ಐ. ನಾರಾಯಣ, ಕಂಬದಕೋಣೆ ಗ್ರಾ.ಪಂ ಅಧ್ಯಕ್ಷ ಆನಂದ ಪೂಜಾರಿ, ಕೆರ್ಗಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೋಮು ಅತಿಥಿಗಳಾಗಿದ್ದರು.


ಸಂವೇದನಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಸಾಪ ಬೈಂದೂರು ತಾಲೂಕು ಅಧ್ಯಕ್ಷ ರವೀಂದ್ರ ಎಚ್. ಸ್ವಾಗತಿಸಿ, ಗೌರವ ಕೋಶಾಧ್ಯಕ್ಷ ಕುಶಲ ಗಾಣಿಗ ವಂದಿಸಿದರು. ಗೌರವ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ನಿರೂಪಿಸಿದರು.

ಉದ್ಘಾಟನೆಗೂ ಪೂರ್ವದಲ್ಲಿ ಕಂಬದಕೋಣೆ ಗ್ರಾ.ಪಂ ಅಧ್ಯಕ್ಷ ಆನಂದ ಪೂಜಾರಿ ರಾಷ್ಟ್ರ ಧ್ವಜಾರೋಹಣ, ಕೆರ್ಗಾಲು ಗ್ರಾ. ಪಂ. ಅಧ್ಯಕ್ಷೆ ಸೋಮು ಕನ್ನಡ ಧ್ವಜಾರೋಹಣ ಹಾಗೂ ಕಸಾಪ ಬೈಂದೂರು ತಾಲೂಕು ಅಧ್ಯಕ್ಷ  ರವೀಂದ್ರ ದೇವಾಡಿಗ ಪರಿಷತ್ ಧ್ವಜಾರೋಹಣ ಮಾಡಿದರು. ಉಪನ್ಯಾಸಕ ಜಯರಾಮ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ತಾಲೂಕು ಗೌರವ ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ನಾಡಾ ಮೊದಲಾದವರು ಉಪಸ್ಥಿತರಿದ್ದರು. 

ಅಭೂತಪೂರ್ವ ಮೆರವಣಿಗೆ:
ಸಮ್ಮೇಳನ ಅಧ್ಯಕ್ಷರನ್ನು ಕಂಬದಕೋಣೆಯಿಂದ ಮೆರವಣಿಗೆಯ ಮೂಲಕ ಕರೆತರಲಾಯಿತು. ಇದಕ್ಕೂ ಮೊದಲು ಮರವಂತೆಯ ಗ್ರಾಮಸ್ಥರು ಹತ್ತಾರು ವಾಹನಗಳ ಸಾಲಿನೊಂದಿಗೆ ಅಧ್ಯಕ್ಷರನ್ನು ಕರೆತಂದದ್ದು ವಿಶೇಷವಾಗಿತ್ತು. ಮರವಂತೆ ಕೊರಗ ತನಿಯ ಕಲಾತಂಡದ ಡೋಲು, ಸದಾಶಿವ ಶ್ಯಾನುಭೋಗರ ಸೂರ್ಯವಾದ್ಯ ವಿಶೇಷ ಆಕರ್ಷಣೆಯಾಗಿತ್ತು. 

ಗಮನ ಸೆಳೆದ ತಿಂಡಿ, ಊಟದ ಮೆನು:
ಸಮ್ಮೇಳನದ ತಿಂಡಿ ಹಾಗೂ ಊಟದ ಮೆನು ಸಾಹಿತ್ಯಾಸಕ್ತರ ಗಮನ ಸೆಳೆಯಿತು.  ಬೆಳಗಿನ ಬಿಗು ಉಪಹಾರವಾಗಿ ನೂಕಡ್ಡಿ ಪುಲಾವ್, ಅಡಿಗಾಸ್ ಚಟ್ನಿ, ಮಾಯ್ಯಾಸ್ ತುಪ್ಪದ ಕೇಸರಿಬಾತ್, ಅಸ್ಸಾಂ ಚಹಾ, ಚಕ್ಕಮಂಗಳೂರು ಕಾಫಿ ಇದ್ದರೆ, ಮಧ್ಯಾಹ್ನ ಟಾಟಾ ಉಪ್ಪು, ಬೇಡಕರ್ ಉಪ್ಪಿನಕಾಯಿ, ಎಂಟಿಆರ್ ಗೊಚ್ಚು, ಕುಜ್ಜೆ ಅಜತ್ನ, ಗಂಗಾವತಿ ಸಣ್ಣಕ್ಕಿ ಅನ್ನ, ಕೋಲಾರ ಟೊಮೆಟೋ ಸಾರು, ನಾಗೂರು ಸೌತೆಕಾಯಿ ನುಗ್ಗೆಕಾಯಿ ಹುಳಿ, ಗುಣ ಸುಂದರಿ, ಖಡ್ಗ ರಾವಣ, ಪತಂಜಲಿ ಪಾಯಸ, ನಂದಿನಿ ಜೀರ್ಣಾಮೃತವಿದ್ದರೆ, ಸಂಜೆ ಲಘು ಉಪಹಾರಕ್ಕೆ ಕೊಡಗಿನ ಚಹಾ, ಬ್ರೆಜಿಲ್ ಕಾಫಿ, ಕಾರಂತರ ಗ್ಯಾಸ್ ಬೋಂಡಾ, ತಾಂಬೂಲದಲ್ಲಿ ಹಿರಿಯ ಸಾಹಿತಿಗಳಿಗೆ ನಂಜನಗೂಡು ನಶ್ಯ, ಕಿರಿಯ ಸಾಹಿತಿಗಳಿಗೆ ಮೋಹಿನಿ ನಶ್ಯ, ಬಂಡಾಯ ಸಾಹಿತಿಗಳಿಗೆ ಚಂಪಾ ನಷ್ಯ ಇದೆ ಎಂದು ಮುದ್ರಿಸಿದ್ದರು.

ಪುಕ್ತಕ ಕೊಳ್ಳುವವರ ಸಂಖ್ಯೆ ಕ್ಷೀಣ:
ಸಾಹಿತ್ಯ ಸಮ್ಮೇಳನದಲ್ಲಿ ೩-೪ ಪುಸ್ತಕದ ಅಂಗಡಿಗಳು ಬಂದಿದ್ದರೂ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಪುಸ್ತಕ ಕೊಳ್ಳುತ್ತಿರುವುದು ಕಂಡುಬಂತು. 

ಹಳೆಯ ವಸ್ತುಗಳ ಪ್ರದರ್ಶನ:
ಸಮ್ಮೇಳನದಲ್ಲಿ ಹಳೆ ಕಾಲದ ಜಾನಪದ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಸಾಹಿತ್ಯ ಸಮ್ಮೇಳನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಅವರು ಸಂಗ್ರಹಿಸಿದ್ದ ಹಳೆ ಕಾಲದ ನಾಣ್ಯಗಳು, ವಿವಿಧ ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶಿಸಿದ್ದರು.

ಉದಯರಾಗ:
ತ್ರಾಸಿ ರಾಜೇಶ್ ದೇವಾಡಿಗ ಮತ್ತು ಬಳಗ ಉದಯರಾಗದಲ್ಲಿ ಪ್ರಸ್ತುತಪಡಿಸಿದ ಸ್ಯಾಕ್ಸೋಫೋನ್ ವಾದನ ಗಮನ ಸೆಳೆಯಿತು.

ಅಚ್ಚುಕಟ್ಟು ಸಮ್ಮೇಳನ:
ಬೈಂದೂರು ತಾಲೂಕು ಇಡಿ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಿತು. ಎಲ್ಲಿಯೂ ಗೊಂದಲವಿಲ್ಲದೇ ಸಮಾರೋಪದ ತನಕ ವಿವಿಧ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

► ಅಡಿಗರ ಸ್ಮಾರಕ ನಿರ್ಮಾಣವೇ ತನಗೆ ನೀಡಬಹುದಾದ ಗುರುದಕ್ಷಿಣೆ   - https://bit.ly/2GVffYW .