ಸಹಕಾರಿ ಧುರಿಣ ರಾಜು ಪೂಜಾರಿ ಅವರಿಗೆ ರಾಜ್ಯ ಮಟ್ಟದ ’ಉತ್ತಮ ಸಹಕಾರಿ’ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸಾಗರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಹಾಗೂ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರಿಗೆ ರಾಜ್ಯ ಮಟ್ಟದ ’ಉತ್ತಮ ಸಹಕಾರಿ’ ಪ್ರಶಸ್ತಿ ಲಭಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ 64ನೇ ಸಹಕಾರಿ ಸಪ್ತಾಹದ ಅಂಗವಾಗಿ ಸಹಕಾರಿ ಕ್ಷೇತ್ರದ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಸಹಕಾರಿಗಳನ್ನು ಗುರುತಿಸಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ. 

ಪತ್ತಿನ ಸಹಕಾರ ಬ್ಯಾಂಕುಗಳ ವಿಭಾಗದಲ್ಲಿ ರಾಜು ಪೂಜಾರಿ ಅವರನ್ನು ಉತ್ತಮ ಸಹಕಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಳೆದ 23 ವರ್ಷಗಳಿಂದ ಸಹಕಾರಿ ಕ್ಷೇತ್ರದ ವಿವಿಧ ಸಂಸ್ಥೆಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪ್ರಶಸ್ತಿಯ ಆಯ್ಕೆ ಸಮಿತಿ ಪರಿಗಣಿಸಿದೆ. ನ 17ರಂದು ಬಾಗಲಕೋಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ’೬೪ನೇಯ ಸಹಕಾರಿ ಸಪ್ತಾಹ’ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರಿ ಸಚಿವ ರಮೇಶ್ ಜಾರಕಿಹೊಳೆ ಪ್ರಶಸ್ತಿ ಪ್ರದಾನ ಮಾಡಲಿದ್ದು ಸಚಿವರು ಹಾಗೂ ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ತಾಲೂಕಿನ ಸಹಕಾರಿಯೋರ್ವರು ಇದೇ ಮೊದಲ ಭಾರಿಗೆ ರಾಜ್ಯ ಮಟ್ಟದ ಸಹಕಾರಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. 

ಸಹಕಾರಿ ಧುರಿಣ:
ಸಹಕಾರಿ ರಂಗದಲ್ಲಿ ರಾಜು ಪೂಜಾರಿ ಅವರು ಛಾಪು ಮೂಡಿಸಿದವರು. ಸಹಕಾರಿಗಳ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ತೊಡಗಿಸಿಕೊಂಡು ಜನಸಾಮಾನ್ಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. 

ಕಳೆದ 23ವರ್ಷಗಳಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ; ಮರವಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕರಾಗಿ, ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಸ್ಕ್ಯಾಡ್ಸ್, ಟಿಎಪಿಸಿಎಂಎಸ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಯಡ್ತರೆ ಹಾಲು ಉತ್ಪಾದರ ಸಹಕಾರಿ ಸಂಘದ  ನಿರ್ದೇಶಕರಾಗಿ; ಸಾಗರ್ ಕ್ರೆಡಿಟ್ ಕೋ-ಆಪರೇಟಿವ್‌ನ ಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರಿನಲ್ಲಿ ಉತ್ಕಷ್ಟವಾದ ಶೈಕ್ಷಣಿಕ ವಾತಾವರಣ ನಿರ್ಮಿಸುವುವಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಧಾರ್ಮಿಕ ಪ್ರಜ್ಞೆಯನ್ನು ಗಟ್ಟಿಗೊಳಿಸುವಲ್ಲಿ, ಬೈಂದೂರು ತಾಲೂಕು ಹೋರಾಟದಲ್ಲಿ ರಾಜು ಪೂಜಾರಿ ಅವರ ಪಾತ್ರ ಎಂದಿಗೂ ಸ್ಮರಣೀಯ.