ಕಂದಮ್ಮನ ಸಮಕ್ಷಮದಲ್ಲಿ ನಡೆಯಿತು ಅಪ್ಪ-ಅಮ್ಮನ ಮದುವೆ

ಕುಂದಾಪುರ:  ಇಲ್ಲಿನ ರಕ್ತೇಶ್ವರಿ ದೇವಸ್ಥಾನದ ಸಭಾಂಗಣ ಒಂದು ವಿಶೇಷ ಮದುವೆಗೆ ಸಾಕ್ಷಿಯಾಯಿತು. ಎಂಟು ತಿಂಗಳ ಮಗಳು ಪಂಚಮಿಯ ಸಮಕ್ಷಮದಲ್ಲಿ ಅದರ ಜನ್ಮದಾತರು ನಮ್ಮ ಭೂಮಿ ಸಂಸ್ಥೆಯ ನೇತೃತ್ವದಲ್ಲಿ ನಡೆದ ಮದುವೆಯಲ್ಲಿ ಸತಿ-ಪತಿಗಳಾದರು. ಈ ಘಟನೆಗೆ ವಧು-ವರ ಪೋಷಕರು, ಕುಂದಾಪುರದ ಪೋಲಿಸರು, ಹಿತೈಶಿಗಳು ಮದುವೆಯಲ್ಲಿ ಪಾಲ್ಗೊಂಡು ದಂಪತಿಗಳನ್ನು ಹಾರೈಸಿದರು.

ಏನಿದು ಘಟನೆ:
    ಮೂಲತಃ ತಲ್ಲೂರು ಗುಡ್ಡೆಯಂಗಡಿಯವಳಾದ ಸ್ವಾತಿಗೆ ಸಾಗರ ನಿವಾಸಿ ಶಶಿಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಈ ಭಾಗದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶಶಿಕುಮಾರ್ ಸ್ವಾತಿಯ ನಡುವೆ  ಒಂದೆರಡು ವರ್ಷ ಪ್ರೇಮವೂ ಮುಂದುವರಿದಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶಶಿಕುಮಾರ್ ದೈಹಿಕ ಸಂಪರ್ಕವನ್ನೂ ಬೆಳೆಸಿ ಆಕೆ ಗರ್ಭವತಿಯಾಗಿದ್ದಳು. ಇದು ತಿಳಿಯುತ್ತಿದ್ದಂತೆ ಆತ ನಾಪತ್ತೆಯಾಗಿದ್ದ. ಇದರಿಂದ ಆಘಾತಕ್ಕೊಳಗಾದ ಸ್ವಾತಿ ತಿಂಗಳು ತುಂಬುತ್ತಿದ್ದಂತೆ (ಅಗಸ್ಟ್ 2014ರ ವೇಳೆ) ಸಾಗರಕ್ಕೆ ತೆರಳುವ ನೆಪಮಾಡಿಕೊಂಡು ತನ್ನ ತಾಯಿಯೊಂದಿಗೆ ಹೊರಟು ಜಡ್ಕಲ್ ಸಮಿಪ ಹಾಡಿಯೊಂದರ ಬಳಿ ನವಜಾತ ಶಿಶುವಿಗೆ ಜನ್ಮ ನೀಡಿ ಮಗುವನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದಳು.
   ಈ ವಿಚಾರ ತಿಳಿದ ಕುಂದಾಪುರದ ಚಾಲುಕ್ಯ ಪತ್ರಿಕೆ ಸಂಪಾದಕ ಚಂದ್ರಮ ತಲ್ಲೂರು ಹಾಗೂ ವಿಜಯವಾಣಿ ವರದಿಗಾರ ಜಯಶೇಖರ್ ಮಡಪ್ಪಾಡಿಯವರು ಸ್ವಾತಿ ತೆರಳಿದ್ದ ಓಮ್ನಿ ಕಾರಿನ ಚಾಲಕನಿಂದ ಮಗುವಿರುವ ಸ್ಥಳಕ್ಕೆ ತೆರಳಿ ಮಗುವನ್ನು ಪತ್ತೆ ಹಚ್ಚುತ್ತಾರೆ. ದಿನವಿಡಿ ಮಳೆ ಸುರಿಯುತ್ತಿದ್ದರಿಂದ ನವಜಾತ ಶಿಶುವು ಒಂದು ರಾತ್ರಿ ಒಂದು ಸಂಪೂರ್ಣ ಹಗಲು ಅದೇ ಮಳೆಯಲ್ಲಿ ತೊಯ್ದು ಹೋಗಿತ್ತು. ಪತ್ರಕರ್ತರು ಕೂಡಲೇ ಮಗುವನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. 
     ಅಂದು ಕುಂದಾಪುರ ಡಿವೈ‌ಎಸ್ಪಿ ಸಿ.ಬಿ. ಪಾಟೀಲ್, ವೃತ್ತ ನಿರೀಕ್ಷಕ ದಿವಾಕರ್, ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ತಾಯಿ ಮಗುವನ್ನ ಒಂದುಗೂಡಿಸುವ ಪ್ರಯತ್ನ ನಡೆಸಿದರಾದರೂ ಸ್ವಾತಿಗೆ ಅಪ್ರಾಪ್ತ ವಯಸ್ಸಾದ ಕಾರಣ ಅದು ಸಾಧ್ಯವಾಗಿರಲಿಲ್ಲ. ಆದರೆ ಘಟನೆ ನಡೆದು ಕೆಲವೇ ದಿನಗಳಲ್ಲಿ ಶಿವಕುಮಾರ್ ನ ಬಂಧನವಾಯಿತು. ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡ ಆತ ಸ್ವಾತಿಯನ್ನು ಮದುವೆಯಾಗುದಾಗಿ ತಿಳಿಸಿದ್ದ.
    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಕ್ರಮೇಣ ಚೇತರಿಸಿಕೊಂಡಿತು. ನಾಗರಪಂಚಮಿಯಂದು ಜನಿಸಿದ ಮಗುವಿಗೆ “ಪಂಚಮಿ” ಎಂದು ಹೆಸರಿಡಲಾಗಿತ್ತು. ಪ್ರಕರಣ ಮಕ್ಕಳ ಕಲ್ಯಾಣ ಸಮಿತಿಯಡಿಯಲ್ಲಿ ಬರುವ ಕಾರಣ ವಿಚಾರಣೆ ವೇಳೆ ತಾಯಿ ಅಪ್ರಾತೆಯೆಂದು ತಿಳಿದು ಮಗುವನ್ನು ಹಟ್ಟಿಯಂಗಡಿಯ ನಮ್ಮಭೂಮಿ ಪುನರ್ವಸತಿ ಕೇಂದ್ರಕ್ಕೆ ಸುಪರ್ದಿಗೆ ನೀಡಲಾಯಿತು.
     ಇದೇ ಫೆಬ್ರವರಿ 25ಕ್ಕೆ ಮಗುವಿನ ತಾಯಿ ಸ್ವಾತಿಗೆ 18 ವರ್ಷ ತುಂಬಿದ ಕಾರಣ ಆಕೆಗೆ ಮಗುವ ಪಡೆಯಬದುದೆಂದು ತಿಳಿಸಲಾಯಿತು. ಆದರೆ ಕಾನೂನಾತ್ಮಕವಾಗಿ ಮಗು ಪಡೆಯಲು ಮದುವೆ ಮಾಡಿಕೊಳ್ಳುವುದು ಅಗತ್ಯವಾಗಿತ್ತು. ಕೂಡಲೇ ಸ್ವಾತಿ-ಶಿವಕುಮಾರ್ ಮನೆಯವರೊಂದಿಗೆ ಮಾತುಕತೆ ನಡೆಸಿ ಮದುವೆ ನಿಶ್ಚಯಿಸಿದರು. ಮಧ್ಯಾಹ್ನ 12:15ರ ವೇಳೆಗೆ ಕುಂದಾಪುರ ಠಾಣೆ ಸಮೀಪದಲಿಯೇ ಇರುವ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಇಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯಿತು.  ಮದುವೆಗೆ ಇಬ್ಬರ 8 ತಿಂಗಳ ಮಗು ಪಂಚಮಿ ಸಾಕ್ಷಿಯಾದಳು. ಅಲ್ಲದೇ ಮದುಮಗ ಶಶಿಕುಮಾರ ಕಡೆಯಿಂದ ತಾಯಿ ತುಂಗಮ್ಮ, ಅಜ್ಜಿ ನೀಲಮ್ಮ, ಸೋದರ ಮಾವ ಶಿವಪ್ಪ, ಬಾವ ನಂದಿ, ಮದುಮಗಳು ಸ್ವಾತಿ ಕಡೆಯಿಂದ ಆಕೆಯ ತಾಯಿ ಪ್ರೇಮಾ ಆಗಮಿಸಿದ್ದರು. ನಮ್ಮಭೂಮಿ ಸಂಸ್ಥೆಯ ಪದ್ಮಾವತಿ, ರತ್ನಾ  ಕುಂದಾಪುರದ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಆಪ್ತರು ವಧು-ವರರಿಗೆ ಶುಭಕೋರಿದರು.




ಕುಂದಾಪ್ರ ಡಾಟ್ ಕಾಂ- editor@kundapra.com