ಸಿಂಪಲ್ಲಾಗಿ ಸೆಟ್ಟೇರುತ್ತಿದೆ ಇನ್ನೊಂದು ಲವ್ ಸ್ಟೋರಿ

ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿ ಅವರ ನಿರ್ದೇಶನದಲ್ಲಿ ಕುಂದಾಪುರ ತಾಲೂಕಿನ ವಿವಿಧೆಡೆ ಸಿನಿಮಾ ಚಿತ್ರೀಕರಣ. 
ಕುಂದಾಪುರ: ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಚಿತ್ರದ ಯಶಸ್ವೀ ನಿರ್ದೇಶನದ ಮೂಲಕ ಯುವ ಮನಸ್ಸುಗಳನ್ನು ಗೆದ್ದಿದ್ದ ಸೈಲೆಂಟ್ ಸುನಿ ಅವರ ನಿರ್ದೇಶನದಲ್ಲಿ ಸದ್ದಿಲ್ಲದೇ ಮತ್ತೊಂದು ಚಿತ್ರ ಸೆಟ್ಟೇರಿದೆ. ಅದಾಗಲೇ ಚಿತ್ರದ ಒಂದು ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದ್ದು, ಕರಾವಳಿಯ ಸಂಬಂಧಿಸಿ ಚಿತ್ರಕಥೆಯ ಇನ್ನೊಂದು ಭಾಗ ಕುಂದಾಪುರ ತಾಲೂಕಿನ ಬೈಂದೂರು, ಕೋಡಿ ಹಾಗೂ ಮರ್ಡೇಶ್ವರ, ಅಪ್ಸರಕೊಂಡ, ಉಡುಪಿ ಮುಂತಾದೆಡೆ ಚಿತ್ರಿಕರಣಗೊಳ್ಳುತ್ತಿದೆ.
    
ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ! ವಿಭಿನ್ನವಾದ ಕಥಾ ಹಂದರವನ್ನು ಹೊಂದಿರುವ ಚಿತ್ರವನ್ನು ಜೀ ಕನ್ನಡದ ರಾಧಾ ಕಲ್ಯಾಣ ಧಾರಾವಾಹಿಯ ನಿರ್ಮಾಪಕ ಆಶುಬೆದ್ರ ಸುಮಾರು ಎರಡುವರೇ ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. 
    ಪ್ರತಿಭಾವಂತ ನಟ ಜಾಲಿಡೇಸ್ ಖ್ಯಾತಿಯ ಪ್ರವೀಣ್ ಹಾಗೂ ಯಶಸ್ವಿ ನಟಿ ಮೇಘನಾ ಗಾವ್ಕರ್ ಅವರು ಚಿತ್ರದಲ್ಲಿ ಸಿಂಪಲ್ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಜಾ ರಾವ್, ಸುರೇಶ್ ಮಂಗಳೂರು, ರವಿ ಭಟ್, ಪ್ರೇಮಲತಾ, ಅರ್ಚನಾ ಗಾಯಕವಾಡ್, ಶಿವಮಂಜು, ಆಶಾ ಜೈಸ್ ಮೊದಲಾದ ಹಿರಿ ಕಿರಿಯ ನಟರು ಅಭಿನಯಿಸುತ್ತಿದ್ದಾರೆ.


ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿಯಲ್ಲಿ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿಯ ಪ್ರಭಾವವಿದೆಯಾದರೂ ಚಿತ್ರಕಥೆ ಅದಕ್ಕಿಂತ ಭಿನ್ನವಾಗಿದೆ ಎನ್ನುತ್ತದೆ ಚಿತ್ರತಂಡ. ಚಿತ್ರದ ಬಗ್ಗೆ ಈಗಲೇ ಎಲ್ಲವನ್ನೂ ಹೇಳಲಾಗದು. ಸಿನೆಮಾದ ಟ್ರೇಲರ್ ಬಿಡುಗಡೆಗೊಳ್ಳುವ ತನಕ ಚಿತ್ರದ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಸುನಿ.

ಎಲ್ಲಾ ಚಿತ್ರದಂತೆ ಇಬ್ಬರು ಪ್ರೇಮಿಗಳ ನಡುವೆ ಮೂಡುವ ಪ್ರೀತಿಯ ಹಂದರ, ಬೆಂಗಳೂರಿನಿಂದ ಕಾರವಾರದವರೆಗೆ ಪ್ರಯಾಣ ಸಾಗುತ್ತದೆ. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಖುಷ್ ಹಾಗೂ ಖುಷಿ ಎಂಬ ಹೆಸರಿನಿಂದ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಮಾತು ಡೈಲಾಗ್ ಗಳಿಗೆ ಪ್ರಾಧಾನ್ಯ ನೀಡಲಾಗಿದೆ. ಕರಾವಳಿ ಪ್ರಮುಖ ಪ್ರದೇಶಗಳಲ್ಲಿ ಚಿತ್ರದ ಹಾಡು, ಪ್ರೇಮ ಸಲ್ಲಾಪ, ಎಂಜೆಜ್ಮೆಂಟ್ ಮುಂತಾದ ಸನ್ನಿವೇಶಗಳು ಚಿತ್ರೀಕರಣಗೊಳ್ಳುತ್ತಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಅದರಲ್ಲಿ 2 ಹಾಡುಗಳ ಚಿತ್ರಿಕರಣ ಈಗಾಗಲೇ ಮುಗಿದಿದೆ. ಹಾಡುಗಳಿಗೆ ಭರತ್ ಹಾಗೂ ಸಾಯಿಕಿರಣ್ ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ.
     ಚಿತ್ರದ ನಾಯಕ ಪ್ರವೀಣ ಮೂಲತಃ ಹೊಸನಗರದವರು. ಇವರ ತಂದೆ ಹೊಸಂಗಡಿಯಲ್ಲಿ ಉದ್ಯೋದಲ್ಲಿದ್ದುದರಿಂದ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ಕಳೆದಿದ್ದರು. ಹಾಗಾಗಿ ಅವರಿಗೆ ಕುಂದಾಪುರವೆಂಬುದು ಪರಿಚಿತ. ಇಲ್ಲಿನ ವಾತಾವರಣವೂ ಅಚ್ಚುಮೆಚ್ಚು ಎನ್ನುತ್ತಾರೆ. ಜಾಲಿಡೇಸ್, ಕೋಕೊ, ಆಂತರ್ಯ ಮೊದಲಾದ ಸಿನೆಮಾ, ಟಿ.ವಿ. ಕಾರ್ಯಕ್ರಮಗಳ ನಿರೂಪಣೆ, ರಾಧಾ ಕಲ್ಯಾಣ ಧಾರಾವಾಹಿಗಳಲ್ಲಿ ನಟಿಸಿದ್ದ  ಪ್ರವೀಣ ಈ ಸಿನಿಮಾದಲ್ಲಿ  ನಾಯಕ ನಟನಾಗಿ ಮಿಂಚುತ್ತಿದ್ದಾರೆ.

    ಮೇಘನಾ ಗಾವ್ಕರ್ ಮೂಲತಃ ಗುಲ್ಬರ್ಗಾದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ನರ ಪದವಿ, ಆದರ್ಶ ಫಿಲ್ಮ ಇಸ್ಟಿಟ್ಯೂಟ್ ನಲ್ಲಿ ಚಿತ್ರ ನಟನೆಯನ್ನು ಕಲಿತ ಬಳಿಕ ಚಿತ್ರರಂಗದತ್ತ ಮುಖಮಾಡಿವರು. ನಮ್ ಏರಿಯಾಲಿ ಒಂದಿನ, ವಿನಾಯಕ ಗೆಳೆಯರ ಬಳಗ, ತುಘಲಕ್, ಚಾರ್ಮಿನಾರ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದರು. ನಟನೆಯಷ್ಟೇ ಅಲ್ಲದೇ ಸಾಹಿತ್ಯ ಹಾಗೂ ಬರವಣಿಗೆಯಲ್ಲಿ ಅಭಿರುಚಿಯುಳ್ಳ ಅವರು ನೃತ್ಯದಲ್ಲೂ ಎತ್ತಿದ್ದ ಕೈ.
    ಕುಂದಾಪುರದ ಪರಿಸರ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ ಕುಂದಾಪುರ ಸೆಕೆಯನ್ನು ತಡೆದುಕೊಳ್ಳಲಾಗುತ್ತಿಲ್ಲ. ಆದರೂ ಈ ಪರಿಸರ ನನಗೆ ಅಚ್ಚುಮೆಚ್ಚು. ಈ ಹಿಂದೆಯೂ ನಾನು 3 ಬಾರಿ ಚಿತ್ರಿಕರಣಕ್ಕಾಗಿ ಇಲ್ಲಿಗೆ ಬಂದಿದ್ದೆ. ಪ್ರತಿ ವರ್ಷ ಇಷ್ಟದೇವರಾದ ಕೊಲ್ಲೂರು ಮೂಕಾಂಬೆಯ ದರ್ಶನಕ್ಕೆ ಬರುತ್ತಿರುತ್ತೇನೆ ಎಂದಿದ್ದಾರೆ.  

ಕುಂದಾಪುರದ ಕೋಡಿಯ ಬೀಚ್ ಹಾಗೂ ಚಕ್ರಮ್ಮ ದೇವಸ್ಥಾನದ ಪರಿಸರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಕುಂದಾಪ್ರ ಡಾಟ್ ಕಾಂ- editor@kundapra.com